ಬೆಳಗಾವಿ/ರಾಮದುರ್ಗ :
ವಿಶೇಷ ವರದಿ : ಪ್ರಶಾಂತ ಮಲಗಾಂವಿ,
ಲೋಕಾಪುರ – ರಾಮದುರ್ಗ – ಸವದತ್ತಿ ಮೂಲಕ ಧಾರವಾಡಕ್ಕೆ ಹೋಗುವ ರೈಲು ಮಾರ್ಗದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ರಾಮದುರ್ಗ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸ್ವಯಃ ಪ್ರೇರಿತವಾಗಿ ಪಟ್ಟಣದಲ್ಲಿ ಅಂಗಡಿ ಮುಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ತಾಲೂಕು ದಂಡಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಬಹುದಿನಗಳ ಬೇಡಿಕೆ
1980ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಹನಮಂತಪ್ಪ ಮುನವಳ್ಳಿ ಈ ರೈಲ್ವೆ ಸಂಪರ್ಕ ಮಾಡಲು ಶ್ರಮಿಸುವುದಾಗಿ ಭರವಸೆ ನೀಡಿದ್ದರು. 2016ರಲ್ಲಿ ಸಾಮಾಜಿಕ ಕಾರ್ಯಕರ್ತ ಗುರುಸಿದ್ದಪ್ಪ ತೊಗ್ಗಿ ಹೋರಾಟ ಆರಂಭಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಬಾಗಲಕೋಟೆಯ ಕುತುಬುದ್ದೀನ್ ಖಾಜಿ ಅವರು ಬಾಗಲಕೋಟೆ ಕುಡಚಿ ರೈಲ್ವೆ ಮಾರ್ಗಕ್ಕೆ ಹೋರಾಟ ಆರಂಭಿಸಿದಾಗ ರಾಮದುರ್ಗದ ಬಸೀರಹ್ಮದ್ ಬೈರೆಕದಾರ ಕೂಡ ಹೋರಾಟ ಆರಂಭಿಸಿದ್ದರು. ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಕೂಡ ಕೇಂದ್ರದಲ್ಲಿ ಸದಾನಂದಗೌಡರು, ಸುರೇಶಪ್ರಭು ಅವರಿಗೆ ಮನವಿ ಸಲ್ಲಿಸಿದ ಪರಿಣಾಮ ಲೋಕಾಪುರ ಧಾರವಾಡ ರೈಲ್ವೆ ಮಾರ್ಗದ ಕ್ರಿಯಾ ಯೋಜನೆ ಮತ್ತು ಸರ್ವೇ ಕಾರ್ಯಕ್ಕೆ ಕೇಂದ್ರ ಸರ್ಕಾರ ಒಪ್ಪಿತ್ತು.
ಮತ್ತೆ ಮುನ್ನೆಲೆಗೆ ಬಂದ ಹೋರಾಟ
ರೈಲ್ವೆ ಹೋರಾಟದ ಕೂಗು ಹೆಚ್ಚಾದಾಗ ಮತ್ತೆ ರಾಮದುರ್ಗ ತಾಲೂಕು ರೈಲ್ವೆ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ ಬಂತು. ಇದಕ್ಕೆ ತಾಲೂಕಿನ ಮಠಾಧೀಶರ, ಪಕ್ಷಾತೀತವಾಗಿ ರಾಜಕಾರಣಿಗಳು, ವಿವಿಧ ಸಂಘಟನೆಗಳು, ವ್ಯಾಪಾರಸ್ಥರು ಬೆಂಬಲ ನೀಡಿ, ಹೋರಾಟದಲ್ಲಿ ಭಾಗವಹಿಸಿದ್ದು, ಹೋರಾಟ ಕಿಚ್ಚು ಹೆಚ್ಚಾಗುವಂತೆ ಮಾಡಿದೆ. ಶಾಸಕ ಅಶೋಕ ಪಟ್ಟಣ ಅವರ ಸಹೋದರ ಪ್ರದೀಪ ಪಟ್ಟಣ, ಗೈಬು ಜೈನೇಖಾನ, ಸೇಪಿ ಬೆಣ್ಣಿ, ಸಮಾಜ ಸೇವಕ ಸುಭಾಸಚಂದ್ರ ಘೋಡಕೆ, ಪತ್ರಕರ್ತರಾದ ಎಂ.ಕೆ.ಯಾದವಾಡ, ಪವನ ದೇಶಪಾಂಡೆ, ಜೈ ಭೀಮ ಯುವ ಜಾಗೃತ ಸೇನೆ ರಾಜ್ಯಾಧ್ಯಕ್ಷ ಅಭಿಜೀತ ಎಂ., ಮಾಜಿ ಜಿಪಂ ಸದಸ್ಯ ಜಹುರ ಹಾಜಿ ಸೇರಿದಂತೆ ರಾಮದುರ್ಗ ಪಟ್ಟಣದ ನಾನಾ ಸಂಘಟನೆಯ ಪ್ರಮುಖರು ರೈಲ್ವೆ ಸಮಿತಿಯನ್ನು ಸ್ಥಾಪಿಸಿ, ರೈಲ್ವೆ ಮಾರ್ಗದ ಹೋರಾಟಕ್ಕೆ ಬಲ ತುಂಬಿದರು.
ಧಾರ್ಮಿಕ ಕ್ಷೇತ್ರಗಳ ಪ್ರವಾಸಕ್ಕೆ ಅನಕೂಲ
ಶ್ರೀರಾಮಚಂದ್ರನ ಪರಮ ಭಕ್ತೆ ಶಬರಿದೇವಿ ಕ್ಷೇತ್ರ ಸುರೇಬಾನದ ಶಬರಿಕೊಳ್ಳವು ರಾಮದುರ್ಗ ತಾಲೂಕಿನಲ್ಲಿದೆ. ಈಚೆಗೆ ಅಯೋದ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಪ್ರಾಣ ಪ್ರತಿಷ್ಠಾನದ ವೇಳೆ ಶಬರಿಕೊಳ್ಳಕ್ಕೆ ನಾನಾ ಹೊರ ರಾಜ್ಯಗಳಿಂದ ಭಕ್ತರು, ಸಂಸದರು ಭೇಟಿ ನೀಡಿರುವುದು ತಾಲೂಕಿನ ಇತಿಹಾಸದ ಕುರಿತು ತಿಳಿಸುತ್ತದೆ.
ಅಲ್ಲದೇ ಐತಿಹಾಸಿಕ ಕ್ಷೇತ್ರ ಗೋಡಚಿ ವೀರಭದ್ರೇಶ್ವರ ಮತ್ತು ಸವದತ್ತಿಯ ರೇಣುಕಾ ಯಲ್ಲಮ್ಮನ ದರ್ಶನಕ್ಕೆ ಬರುವ ಮಹಾರಾಷ್ಟ್ರ, ಆಂಧ್ರ ಪ್ರದೇಶದ ಭಕ್ತರಿಗೂ ಈ ಯೋಜನೆಯು ಸಹಕಾರಿಯಾಗಲಿದೆ. ಮುಳ್ಳೂರ ಗುಡ್ಡದಲ್ಲಿ ನಿರ್ಮಾಣವಾಗಿರುವ ಬೃಹದಾಕಾರದ ಶಿವನಮೂರ್ತಿ ಮತ್ತು ನಂದಿ ವಿಗ್ರಹದ ದರ್ಶನದಂತಹ ಪ್ರವಾಸಿ ತಾಣಗಳಿವೆ. ಹೀಗಾಗಿ ಲೋಕಾಪುರ, ರಾಮದುರ್ಗ, ಧಾರವಾಡ ರೈಲ್ವೆ ಸಂಪರ್ಕ ಕಲ್ಪಿಸಲು ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಸಂಸದರು ಪ್ರಯತ್ನಿಸಬೇಕಾದ ಅಗತ್ಯಯಿದೆ.
ಭರವಸೆಯ ಬೆಳಕಾಗುವ ಸಾಧ್ಯತೆ
ಬೆಳಗಾವಿ ಜಿಲ್ಲೆಯ ಕಟ್ಟಕಡೆಯ ತಾಲೂಕು ಹಾಗೂ ಅಭಿವೃದ್ಧಿಯಿಂದ ವಂಚಿತವಾಗಿರುವ ರಾಮದುರ್ಗ ತಾಲೂಕಿನಲ್ಲಿ ಹೇಳಿಕೊಳ್ಳುವಷ್ಟು ಕೈಗಾರಿಕೆಗಳಿಲ್ಲ. ಇದಕ್ಕೆ ಪ್ರಮುಖ ಕಾರಣವೆಂದರೆ ಸರಕು ಸಾಗಾಣಿಕಾ ವೆಚ್ಚವೇ ಆಗಿದೆ. ಬೆಳಗಾವಿಯಿಂದ 110 ಕಿ.ಮಿ ಮತ್ತು ಹುಬ್ಬಳ್ಳಿಯಿಂದ 100 ಕಿ.ಮಿ ದೂರದಲ್ಲಿರುವ ತಾಲೂಕಿನ ಆರ್ಥಿಕ ಅಭಿವೃದ್ಧಿಯಲ್ಲಿ ಈ ರೈಲ್ವೆ ಯೋಜನೆಯು ಪ್ರಮುಖ ಪಾತ್ರ ವಹಿಸಲಿದೆ. ಜೊತೆಗೆ ತಾಲೂಕಿನ ಯುವಕರ ವಲಸೆಯನ್ನು ತಪ್ಪಿಸಬಹುದಾಗಿದೆ. ಅಷ್ಟೇ ಅಲ್ಲದೇ ವಿದ್ಯಾಭ್ಯಾಸಕ್ಕೆಂದು ವಿದ್ಯಾಕಾಶಿ ಧಾರವಾಡಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಧಾರವಾಡ ಹೈಕೋರ್ಟ್ ನ ಕಾರ್ಯ ನಿಮಿತ್ತ ತೆರಳುವ ಪ್ರಯಾಣಿಕರಿಗೆ ಯೋಜನೆಯು ಭರವಸೆಯ ಬೆಳಕಾಗಲಿದೆ.
ಸಹೋದರರ ಅನುಪಸ್ಥಿತಿಯಲ್ಲಿ ಹೋರಾಟಕ್ಕೆ ನಾನು ಹೋರಾಟದಲ್ಲಿದ್ದೇ. ರಾಮದುರ್ಗಕ್ಕೆ ರೈಲ್ವೆ ಮಾರ್ಗ ಬರಲು ನಮ್ಮ ಕುಟುಂಬದ ಸಂಪೂರ್ಣ ಬೆಂಬಲವಿದೆ. ಲೋಕಾಪುರ ರಾಮದುರ್ಗ ಸವದತ್ತಿ ಮಾರ್ಗವಾಗಿ ರೈಲ್ವೆ ಪ್ರಾರಂಭಿಸದಿದ್ದರೇ ಮುಂದಿನ ದಿನಗಳಲ್ಲಿ ರಾಮದುರ್ಗ ತಾಲೂಕ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಕರೆ ಕೊಟ್ಟಿರುವ ನಿರಂತರ ಹೋರಾಟಕ್ಕೆ ನಮ್ಮ ಬೆಂಬಲವಿದೆ .-ಪ್ರದೀಪ ಪಟ್ಟಣ, ಅಧ್ಯಕ್ಷರು ವಿರಕ್ತಮಠ ಟ್ರಸ್ಟ, ರಾಮದುರ್ಗ.
2014 ರಲ್ಲಿ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಅಂದಿನ ರೈಲ್ವೆ ಸಚಿವರಾದ ಸದಾನಂದಗೌಡ ಹಾಗೂ ಸುರೇಶಪ್ರಭು ಅವರಿಗೆ ರಾಮದುರ್ಗ ರೈಲ್ವೆ ಸಂಪರ್ಕ ಕಲ್ಪಿಸುವ ಕುರಿತು ಮನವಿ ಸಲ್ಲಿಸಿದರು. ನಂತರ 2016 ರಲ್ಲಿ ಲೋಕಾಪುರ ರಾಮದುರ್ಗ ಸದವತ್ತಿ ಧಾರವಾಡ ಮಾರ್ಗದ ಸಂಪರ್ಕ ಕಲ್ಪಿಸಲು ಸರ್ವೇ ಕಾರ್ಯ ನಡೆದಿದ್ದು, ಆದರೆ ಇಲ್ಲಿಯವರೆಗೂ ಕಾಮಗಾರಿ ಪ್ರಾರಂಭವಾಗಿಲ್ಲ. ಜನತೆಯು ಒಕ್ಕಟಿನಿಂದ ಹೋರಾಟ ಮಾಡಿದರೇ, ಕಾರ್ಯ ಸಾಧ್ಯವಾಗುತ್ತದೆ.- ಮಲ್ಲಣ್ಣ ಯಾದವಾಡ, ಶ್ರೀ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಧ್ಯಕ್ಷ.