ಬೆಂಗಳೂರು:
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ಮತದಾನದಿಂದ ದೂರ ಉಳಿದಿದ್ದ ಶಿವರಾಮ ಹೆಬ್ಬಾರ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ನಿನ್ನೆ ಗುರುವಾರ ಭೇಟಿ ಮಾಡಿ ಚರ್ಚೆ ನಡೆಸಿದ್ದು ತೀವ್ರ ಕುತೂಹಲ ಮೂಡಿಸಿದೆ. ಈ ಇಬ್ಬರು ಬಿಜೆಪಿ ಶಾಸಕರಿಗೆ ಪಕ್ಷದ ಆದೇಶದ ವಿರುದ್ಧ ಹೋಗಿ ವಿಪ್ ಉಲ್ಲಂಘಿಸಿದ್ದಕ್ಕಾಗಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿತ್ತು.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲ ನೀಡುವ ಕುರಿತು ಈ ಇಬ್ಬರು ನಾಯಕರು ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕೆಂದು ಪಣತೊಟ್ಟಿರುವ ಡಿಸಿಎಂ ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರೂ ತಮ್ಮ ಸಾಮರ್ಥ್ಯವನ್ನು ತೋರಿಸಲು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಮ್ಮ ಬೆಂಬಲವನ್ನು ನೀಡಬಹುದು ಎಂದು ಹೇಳಲಾಗುತ್ತಿದೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಯಶವಂತಪುರ ಶಾಸಕ ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆ ಇದೆ. ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ತಮಿಳುನಾಡಿನ ಜನರು ಬೆಂಗಳೂರಿಗೆ ಬಂದು ಬಾಂಬ್ ಇಟ್ಟಿದ್ದಾರೆ ಎಂದು ಆರೋಪಿಸಿರುವುದನ್ನು ಸೋಮಶೇಖರ್ ಖಂಡಿಸಿದ್ದಾರೆ.
ಈ ಹಿಂದೆ ಡಿಬಿ ಚಂದ್ರೇಗೌಡ ಅಥವಾ ಡಿವಿ ಸದಾನಂದಗೌಡ ಸೇರಿದಂತೆ ಯಾವುದೇ ಬಿಜೆಪಿ ಸಂಸದರು ಇಂತಹ ಹೇಳಿಕೆ ನೀಡಿರಲಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ತೀರ್ಪುಗಳನ್ನು ಉಲ್ಲೇಖಿಸಿ 170 ಪುಟಗಳ ಉತ್ತರಗಳೊಂದಿಗೆ ಬಿಜೆಪಿಯ ಒಂದು ಪುಟದ ಶೋಕಾಸ್ ನೋಟಿಸ್‌ಗೆ ಉತ್ತರಿಸಿದ್ದೇನೆ ಎಂದು ಅವರು ತಿರುಗೇಟು ನೀಡಿದ್ದಾರೆ. ಈ ಮಧ್ಯೆ, ಶಿವರಾಮ್ ಹೆಬ್ಬಾರ್ ಅವರು ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವ ಸಾಧ್ಯತೆಯಿದೆ.