ಬೆಂಗಳೂರು:
ಮಹಿಳೆಯೊಬ್ಬರು ತನ್ನ ನಾಯಿಯೊಂದಿಗೆ ವಾಕಿಂಗ್‌ಗೆ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬ ಲೈಂಗಿಕ ಕಿರುಕುಳ ನೀಡಿದ ಆಘಾತಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ನಡೆದಿದೆ. ಇಂದಿರಾನಗರದಲ್ಲಿ ಈ ಘಟನೆ ನಡೆದಿದ್ದು, 33 ವರ್ಷದ ಮಹಿಳೆ ತನ್ನ ನಾಯಿಯೊಂದಿಗೆ ದಿನನಿತ್ಯದ ಬೆಳಗಿನ ವಾಕಿಂಗ್ ಮಾಡುತ್ತಿದ್ದಾಗ ಈ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬ ಹಿಂದಿನಿಂದ ಆಕೆಯ ಬಳಿಗೆ ಬಂದು “ಮೇಡಂ” ಎಂದು ಕರೆದಿದ್ದಾನೆ. ಆಕೆ ತಿರುಗಿ ನೋಡಿದಾಗ, ಆ ವ್ಯಕ್ತಿ ಆಕೆಯ ಎದುರು ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿ ಏಕಾಏಕಿ ಈ ಹುಚ್ಚಾಟ ಮೆರೆದಿರುವುದರಿಂದ ಆಘಾತಗೊಂಡ ಸಂತ್ರಸ್ತ ಮಹಿಳೆ ಮನೆಗೆ ಓಡಿದ್ದಾರೆ. ನಂತರ ನಡೆದ ವಿಚಾರವನ್ನು ತನ್ನ ಸಹೋದರಿ ಮತ್ತು ಸ್ನೇಹಿತನಿಗೆ ತಿಳಿಸಿದ್ದಾಳೆ. ಇದರ ನಂತರ, ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇಂದಿರಾನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75 ರ ಅಡಿಯಲ್ಲಿ ಸಾರ್ವಜನಿಕ ಅಸಭ್ಯತೆ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಮತ್ತು ಆರೋಪಿಗಳನ್ನು ಗುರುತಿಸಲು ಮತ್ತು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
ಇಂತಹದ್ದೇ ಘಟನೆ ಕೆಲವು ದಿನಗಳ ಹಿಂದೆ ಥಾಣೆಯಲ್ಲಿ ನಡೆದಿತ್ತು. ಥಾಣೆಯಿಂದ ವಾಶಿಗೆ ತೆರಳುತ್ತಿದ್ದ ಹಾರ್ಬರ್ ಲೈನ್ ರೈಲಿನಲ್ಲಿ ಯುವಕನೊಬ್ಬ ಯುವತಿಯನ್ನು ಅಸಭ್ಯವಾಗಿ ನೋಡುತ್ತಲೇ ಹಸ್ತಮೈಥುನದಲ್ಲಿ ತೊಡಗಿದ್ದ. ಕಿಡಿಗೇಡಿಯ ಈ ಕೃತ್ಯ ರೈಲಿನಲ್ಲಿದ್ದ ಇನ್ನೊಬ್ಬ ಪ್ರಯಾಣಿಕ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಯುವಕನ ಹುಚ್ಚಾಟಕ್ಕೆ ಬೇಸತ್ತ ಯುವತಿ ಆತನ ಕಪಾಳಕ್ಕೆ ಹೊಡೆಯುತ್ತಿರುವುದು ಮತ್ತು ಇತರ ಪ್ರಯಾಣಿಕರ ಮುಂದೆ ಆತನಿಗೆ ತೀವ್ರವಾಗಿ ಬೈಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಘಟನೆಯ ಸಂದರ್ಭದಲ್ಲಿ, ಆರೋಪಿಯ ಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕನೊಬ್ಬ ಯುವತಿಗೆ ತನ್ನ ಸೀಟು ಬದಲಾಯಿಸಲು ಸೂಚಿಸಿದ್ದಾನೆ. ಕಾರಣ ಕೇಳಿದಾಗ, “ನಿನ್ನ ಪಕ್ಕದವನು ಅಸಭ್ಯ ಕೃತ್ಯದಲ್ಲಿ ತೊಡಗಿದ್ದಾನೆ” ಎಂದು ತಿಳಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಆರೋಪಿಯನ್ನು ಕಪಾಳಕ್ಕೆ ಹೊಡೆದಿದ್ದಾಳೆ. ದ್ವಾರದ ಬಳಿ ನಿಂತಿದ್ದ ಇನ್ನೊಬ್ಬ ವ್ಯಕ್ತಿಯೂ ಆರೋಪಿಗೆ ಕಪಾಳಮೋಕ್ಷ ಮಾಡಿದ್ದಾನೆ. ಆದರೆ, ಇತರ ಪ್ರಯಾಣಿಕರು ಮೌನವಾಗಿ ಘಟನೆಯನ್ನು ವೀಕ್ಷಿಸುತ್ತಿದ್ದದ್ದು ಕಂಡುಬಂದಿದೆ. ಇನ್ನೂ ಘಟನೆ ವೇಳೆ ತಪ್ಪಿಸಿಕೊಳ್ಳಲು ಆರೋಪಿ ಚಲಿಸುತ್ತಿದ್ದ ರೈಲಿನಿಂದ ಜಿಗಿದಿದ್ದಾನೆ.
ಇನ್ನು ಈ ವಿಡಿಯೊವನ್ನು ಅಬ್ರಾರ್ ಶೇಖ್ ಎಂಬಾತ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, “ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಭ್ಯ ಕೃತ್ಯಗಳು ಅಪರಾಧವಷ್ಟೇ ಅಲ್ಲ, ಸಮಾಜಕ್ಕೆ ಕಪ್ಪು ಚುಕ್ಕೆಯಾಗಿದೆ. ಇಂತಹ ದುಷ್ಟರಿಗೆ ಕಠಿಣ ಶಿಕ್ಷೆಯಾಗದಿದ್ದರೆ, ಯುವತಿಯರ ಸುರಕ್ಷತೆಯ ಮೇಲೆ ದೊಡ್ಡ ಪ್ರಶ್ನೆ ಎದುರಾಗುತ್ತದೆ” ಎಂದು ಬರೆದಿದ್ದರು.








