ಬೆಳಗಾವಿ:
ಸಮವಸ್ತ್ರ ಧರಿಸುವ ವಿಚಾರದಲ್ಲಿ ಮಹಿಳಾ ಪೊಲೀಸರಿಗೆ ವಿನಾಯಿತಿ ನೀಡಲಾಗಿದೆ. 40 ವರ್ಷ ಮೇಲ್ಪಟ್ಟ ಮಹಿಳಾ ಪೊಲೀಸರು ಪ್ಯಾಂಟ್, ಷರ್ಟ್ ಬದಲಿಗೆ ತಮಗೆ ಅನುಕೂಲವಾಗುವಂತೆ ಸೀರೆ, ಚೂಡಿದಾರ್ ಧರಿಸಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿಂದು ಬಿಜೆಪಿ ಸದಸ್ಯೆ ತೇಜಸ್ವಿನಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಹಿಳಾ ಪೆಲೀಸ್ ಸಿಬ್ಬಂದಿ ಸೀರೆ ಬದಲಿಗೆ ಪ್ಯಾಂಟ್ ಸಮವಸ್ತ್ರ ಕಡ್ಡಾಯಗೊಳಿಸಿ ಗೃಹ ಇಲಾಖೆ ಆಗಸ್ಟ್ನಲ್ಲಿ ಆದೇಶ ಹೊರಡಿಸಿತ್ತು. ಕರ್ನಾಟಕ ಪೆಲೀಸ್ ಕಾಯಿದೆ ಪ್ರಕಾರ ಪ್ರತಿಯೊಬ್ಬ ಮಹಿಳಾ ಸಿಬ್ಬಂದಿ ವಿಶೇಷ ಸಂದರ್ಭ ಹೊರತುಪಡಿಸಿ ಕಡ್ಡಾಯವಾಗಿ ಪ್ಯಾಂಟ್ ಸಮವಸ್ತ್ರ ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕೆಂಬ ನಿಯಮವಿದೆ ಎಂದರು.
ಕಡ್ಡಾಯ ಆದೇಶದಿಂದಾಗಿ ಕೆಲ ಮಹಿಳಾ ಪೆಲೀಸ್ ಸಿಬ್ಬಂದಿಗೆ ಕಿರಿಕಿರಿ ಉಂಟಾಗಿ ಇಲಾಖೆಯ ಮುಖ್ಯಸ್ಥರಿಗೆ ಅನೇಕ ದೂರುಗಳು ಸಲ್ಲಿಕೆಯಾಗಿದ್ದವು. ಸ್ಥೂಲಕಾಯದ, ಗರ್ಭಿಣಿ, ವಯಸ್ಸಾದ ಮಹಿಳಾ ಸಿಬ್ಬಂದಿಗೆ ಸಮವಸ್ತ್ರ ನಿಯಮ ಸರಿ ಹೊಂದುವುದಿಲ್ಲ ಎಂದು ತೇಜಸ್ವಿನಿ ಆಕ್ಷೇಪಿಸಿದಾಗ ಡಾ.ಜಿ.ಪರಮೇಶ್ವರ್ ಉತ್ತರಿಸಿ,40 ವರ್ಷ ಮೇಲ್ಪಟ್ಟ ವಯೋಮಾನದ ಮಹಿಳಾ ಸಿಬ್ಬಂದಿಗೆ ಆದ್ಯತೆ ಮೇರೆಗೆ ಸಮವಸ್ತ್ರದಲ್ಲಿ ವಿನಾಯಿತಿ ನೀಡುವುದಾಗಿ ಸ್ಪಷ್ಟಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ