ಪ್ರಧಾನಿ ಮೋದಿಯವರಂತೆ ದುಡಿದು ಬಿಜೆಪಿ ಗೆಲ್ಲಿಸಿ:ಬಿಎಸ್‌ವೈ

ಬೆಂಗಳೂರು

     ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸವನ್ನು ನೀವೆಲ್ಲರೂ ನೋಡಿದ್ದೀರಿ. ದೇಶ ವಿದೇಶಗಳನ್ನು ಸುತ್ತಿ ಬಂದರೂ ಸಹ ಕಳೆದ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ವಿಶ್ರಾಂತಿ ಪಡೆಯದೆ ದೇಶದ ಅಭಿವೃದ್ಧಿಗಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಜಿ ನಮಗೆಲ್ಲರಿಗೂ ಆದರ್ಶ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.

    ತುರುವೇಕೆರೆಯಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆ ಬೃಹತ್ ರೋಡ್ ಷೋ ಸಂದರ್ಭದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ರಾಜ್ಯದಲ್ಲಿ ಪ್ರಧಾನಿಯವರಂತೆ ಹಗಲಿರುಳು ಶ್ರಮಿಸಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು. ಹೇಮಾವತಿ ಯೋಜನೆ ಅಗಲೀಕರಣಕ್ಕೆ 1,100 ಕೋಟಿಯನ್ನು ಕೊಟ್ಟಿದ್ದೇವೆ. ಮಸಾಲಾ ಜಯರಾಂ ಇಲ್ಲಿನ ಅಭಿವೃದ್ಧಿಗೆ 1,600 ಕೋಟಿ ತಂದಿದ್ದಾರೆ. ಇದೊಂದು ದಾಖಲೆ ಎಂದು ಅವರು ತಿಳಿಸಿದರು. ಬೇರೆಯವರು ಠೇವಣಿ ಕಳಕೊಳ್ಳುವ ಮಾದರಿಯಲ್ಲಿ ಮಸಾಲಾ ಜಯರಾಂ ಅವರಿಗೆ ಆಶೀರ್ವಾದ ಮಾಡಿ ಎಂದು ವಿನಂತಿಸಿದರು. 

    ಕಾಂಗ್ರೆಸ್‌ನವರ ಕಾಲ ಮುಗಿದಿದೆ. ಆ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಯಾವ ಲೆಕ್ಕಕ್ಕೆ ಎಂದು ಪ್ರಶ್ನಿಸಿದರು. ಆತ ಸರಿಸಮ ಆಗಲು ಸಾಧ್ಯವೇ? ಮೋದಿಜಿ ಬಗ್ಗೆ ಇಡೀ ದೇಶ ಕೊಂಡಾಡುತ್ತಿದೆ. ಅಂಥ ಮಹಾನ್ ವ್ಯಕ್ತಿಯ ನೇತೃತ್ವದ ಪಕ್ಷ ನಮ್ಮದು. ಅದಕ್ಕೆ ಗೌರವ ತರುವಂತೆ ನಾವು, ನೀವು ಕೆಲಸ ಮಾಡಬೇಕು ಎಂದು ಯಡಿಯೂರಪ್ಪ ಅವರು ತಿಳಿಸಿದರು.

    ದೇಶಕ್ಕೆ ತುರ್ತು ಪರಿಸ್ಥಿತಿ ತಂದು ಲೋಕನಾಯಕ ಜಯಪ್ರಕಾಶ್ ನಾರಾಯಣ್, ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರನ್ನು ಬಂಧಿಸಿ ಜೈಲಿನಲ್ಲಿ ಇಟ್ಟವರು ಕಾಂಗ್ರೆಸ್ಸಿಗರು. ಯಾವುದೇ ರೀತಿಯ ಕ್ಷಮೆಗೆ ಅವರು ಅರ್ಹರಲ್ಲ. ಈಚೆಗೆ ನಡೆದ 3 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ನೆಲಸಮ ಆಗಿದೆ. ಎಲ್ಲಿದೆ ಕಾಂಗ್ರೆಸ್ ಎಂದು ಕೇಳಿದರಲ್ಲದೆ, ಕಾಂಗ್ರೆಸ್ ಪಕ್ಷ ದಿವಾಳಿತನದತ್ತ ಹೋಗುತ್ತಿದೆ. ಈ ಬಾರಿ 140ಕ್ಕೂ ಹೆಚ್ಚು ಸೀಟು ಗೆದ್ದು ಕರ್ನಾಟಕದಲ್ಲಿ ಬಿಜೆಪಿ ಸರಕಾರ ತರುವುದು ನಿಶ್ಚಿತ ಎಂದು ವಿಶ್ವಾಸದಿಂದ ನುಡಿದರು.

     ಸಿ.ಟಿ.ರವಿ, ರಾಜ್ಯದ ಸಚಿವ ಮಾಧುಸ್ವಾಮಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಸಂಸದ ಬಸವರಾಜ್, ಶಾಸಕ ಮಸಾಲಾ ಜಯರಾಂ, ಯಾತ್ರೆ ಸಂಚಾಲಕ ಸಚ್ಚಿದಾನಂದ ಮೂರ್ತಿ ಮತ್ತಿತರರು ರೋಡ್ ಷೋದಲ್ಲಿ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap