ವಿಶ್ವಕಪ್‌ ಗೆದ್ದರೂ ದಿವ್ಯಾ ವಿಶ್ವ ಚಾಂಪಿಯನ್‌ ಅಲ್ಲ!

ಬಟುಮಿ

     ಭಾರತದ ಯುವ ಚೆಸ್‌ ತಾರೆ ದಿವ್ಯಾ ದೇಶ್‌ಮುಖ್‌ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡಿ ಐತಿಹಾಸಿಕ ಸಾಧನೆ ಮಾಡಿದಾರೆ. ಜತೆಗೆ ಚೆಸ್‌ನ ಅತ್ಯುನ್ನತ ಪಟ್ಟ ಎನಿಸಿಕೊಂಡಿರುವ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ್ದಾರೆ. ಆದರೆ ದಿವ್ಯಾ ವಿಶ್ವಕಪ್‌ ವಿಜೇತೆಯಾಗಿದ್ದರೂ, ವಿಶ್ವ ಚಾಂಪಿಯನ್‌ ಅಲ್ಲ.

    ಹೌದು, ಚೆಸ್‌ನಲ್ಲಿ ವಿಶ್ವಕಪ್‌ ಬೇರೆ, ವಿಶ್ವ ಚಾಂಪಿಯನ್‌ಶಿಪ್‌ ಬೇರೆ. ಈ ಎರಡೂ ಟೂರ್ನಿಗಳನ್ನು ಚೆಸ್‌ನ ಜಾಗತಿಕ ಆಡಳಿತ ಮಂಡಳಿ ಫಿಡೆ ಆಯೋಜಿಸಿರೂ ಕೂಡ ಚೆಸ್ ವಿಶ್ವಕಪ್‌ ಎಂಬುದು ಒಂದು ಟೂರ್ನಿಯಾಗಿದ್ದು, ಇದರಲ್ಲಿ ಅಗ್ರ-3 ಸ್ಥಾನ ಪಡೆದ ಸ್ಪರ್ಧಿಗಳು ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಪಡೆಯುತ್ತಾರೆ. ಇನ್ನಿತರ ಟೂರ್ನಿಗಳಲ್ಲಿ ಗೆದ್ದವರು ಸೇರಿ ಒಟ್ಟು 8 ಮಂದಿ ನಡುವೆ ಕ್ಯಾಂಡಿಡೇಟ್ಸ್‌ ಟೂರ್ನಿ ನಡೆಯುತ್ತದೆ. ಕ್ಯಾಂಡಿಡೇಟ್ಸ್‌ ಗೆದ್ದವರು ಹಾಲಿ ವಿಶ್ವ ಚಾಂಪಿಯನ್‌ ಜತೆ ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ.

   ಭಾರತದ ಮಹಿಳೆಯರು ಒಮ್ಮೆಯೂ ವಿಶ್ವ ಚಾಂಪಿಯನ್‌ ಆಗಿಲ್ಲ. ಪುರುಷರಲ್ಲಿ ವಿಶ್ವನಾಥನ್‌ ಆನಂದ್, ಡಿ.ಗುಕೇಶ್‌ ಮಾತ್ರ ಈ ಸಾಧನೆ ಮಾಡಿದ್ದಾರೆ. ವಿಶ್ವ ಕಪ್‌ ಫೈನಲ್‌ನಲ್ಲಿ ಸೋಲು ಕಂಡು ರನ್ನರ್‌ ಅಪ್‌ ಸ್ಥಾನ ಪಡೆದ ಕೊನೆರು ಹಂಪಿ ಕ್ಯಾಂಡಿಡೇಟ್ಸ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಅವರು ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ಗೆದ್ದರೆ ಅವರಿಗೂ ವಿಶ್ವ ಚಾಂಪಿಯನ್‌ ಪಟ್ಟಕ್ಕಾಗಿ ಸ್ಪರ್ಧಿಸಬಹುದು.

   ಆಂಧ್ರ ಪ್ರದೇಶದ 38 ವರ್ಷದ ಗ್ರ್ಯಾಂಡ್‌ಮಾಸ್ಟರ್‌ ಕೊನೆರು ಹಂಪಿ ಇತ್ತೀಚೆಗಷ್ಟೇ ಮಹಿಳಾ ರ್‍ಯಾಪಿಡ್‌ ವಿಶ್ವ ಚಾಂಪಿಯನ್‌ಶಿಪ್‌ ಆಗಿ ಹೊರಹೊಮ್ಮಿದ್ದರು. ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎಂದೇ ಕರೆಸಿಕೊಳ್ಳುತ್ತಿದ್ದ ಅವರು ಫೈನಲ್‌ ಪಂದ್ಯದ ಎರಡು ಗೇಮ್‌ಗಳಲ್ಲಿ ಡ್ರಾ ಸಾಧಿಸಿ ಟೈ ಬ್ರೇಕರ್‌ನಲ್ಲಿಯೂ ಗೆಲ್ಲುವ ವಿಶ್ವಾಸದಲ್ಲಿದ್ದರು. ಆದರೆ ನಾಗ್ಪುರದ 19 ವರ್ಷದ ದಿವ್ಯಾ ಟೈ ಬ್ರೇಕರ್‌ನಲ್ಲಿ 1.5-0.5 ಅಂಕಗಳ ಅಂತರದಲ್ಲಿ ಗೆದ್ದು ಇತಿಹಾಸ ನಿರ್ಮಿಸಿದರು.

Recent Articles

spot_img

Related Stories

Share via
Copy link