ಬೆಂಗಳೂರು:
ಗುರುವಾರ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ, ಹಾಲಿ ಹಾಗೂ ಏಳು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಮೂಲಕ ಭಾರತ ತಂಡ ಫೈನಲ್ ಪ್ರವೆಶೀಸಿತು. ಪಂದ್ಯದಲ್ಲಿ ಆಕರ್ಷಕ ಆಟವಾಡಿ ಅಜೇಯ ಶತಕ ಬಾರಿಸಿ ಆತಿಥೇಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಜೆಮಿಮಾ ರಾಡ್ರಿಗಸ್ ಅವರು ಕರಾವಳಿ ಮೂಲದವರು. ಅವರ ಈ ಸಾಧನೆ ಕಂಡು ತುಳುನಾಡು ಮತ್ತು ಕರಾವಳಿ ಕರ್ನಾಟಕದ ಮುಂಬಯಿಗರೆಲ್ಲರೂ ಹೆಮ್ಮೆಪಟ್ಟಿದಾರೆ.
ಹೌದು, ಜೆಮಿಮಾ ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಅವರಿಗೆ ಕರಾವಳಿಯ ನಂಟು ಕೂಡ ಇದೆ. ಜೆಮಿಮಾ ರೋಡ್ರಿಗಸ್ ಅವರ ತಂದೆ ಇವಾನ್ ರೋಡ್ರಿಗಸ್, ಮಂಗಳೂರಿನವರು. ಆಕೆಯ ತಾಯಿ, ಲ್ಯಾವಿಟಾ ರೋಡ್ರಿಗಸ್ ಉಡುಪಿಯವರಾಗಿದ್ದಾರೆ. ಜೆಮಿಮಾ ಕ್ರಿಕೆಟ್ ಮಾತ್ರವಲ್ಲದೆ ಹಾಕಿಯಲ್ಲಿಯೂ ಛಾಪು ಮೂಡಿಸಿದ್ದಾರೆ. ಶಾಲಾ ದಿನಗಳಲ್ಲಿ ಹಾಕಿ ಟೂರ್ನಿಯಲ್ಲಿಯೂ ಆಡಿದ್ದರು. ಆದರೆ ಅಂತಿಮವಾಗಿ ಕ್ರಿಕೆಟ್ ಆಯ್ಕೆ ಮಾಡಿಕೊಂಡು ಇದೀಗ ಭಾರತ ಮಹಿಳಾ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ.
ಜೆಮಿಮಾ ರಾಡ್ರಿಗಸ್ ಅವರಿಗೆ ಇದು ಚೊಚ್ಚಲ ವಿಶ್ವಕಪ್ ಟೂರ್ನಿಯಾಗಿದೆ. ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಜೆಮಿಮಾ ಕ್ರೀಸ್ನಲ್ಲಿ ಬೇರೂರಿ ನಿಂತು ಆಸೀಸ್ ಬೌಲರ್ಗಳನ್ನು ಬೆಂಡೆತ್ತಿದರು. ತಂಡದ ಗೆಲುವಿಗೆ ಟೊಂಕ ಕಟ್ಟಿ ನಿಂತ ಅವರು ಶತಕ ಬಾರಿಸಿದರೂ ಸಂಭ್ರಮಿಸಲಿಲ್ಲ. ತಂಡವನ್ನು ಗೆಲುವಿನ ದಡ ಸೇರಿಸುವುದೇ ಅವರ ಪ್ರಧಾನ ಲಕ್ಷ್ಯವಾಗಿತ್ತು. ತಂಡ ಗೆಲ್ಲುತ್ತಿದ್ದಂತೆ ಭಾವುಕರಾದ ಜೆಮಿಮಾ ಮೈದಾನದಲ್ಲೇ ಸಂತಸದಿಂದ ಕಣ್ಣೀರು ಸುರಿಸಿದರು. ಪಂದ್ಯದ ಬಳಿಕ ಮಾತನಾಡುವ ವೇಳೆಯೂ ಭಾವುಕರಾಗಿಯೇ ಕಂಡುಬಂದರು.
134 ಎಸೆತ ಎದುರಿಸಿದ ಜೆಮಿಮಾ 14 ಬೌಂಡರಿ ನೆರವಿನಿಂದ ಅಜೇಯ 127* ರನ್ ಬಾರಿಸಿದರು. ನಾಯಕಿ ಹರ್ಮನ್ಪ್ರೀತ್ ಕೌರ್ ಜತೆಗೂಡಿ 167 ರನ್ ಜತೆಯಾಟ ನಡೆಸಿದರು. ಇದು ಏಕದಿನ ಕ್ರಿಕೆಟ್ನಲ್ಲಿ ದಾಖಲೆ ಚೇಸ್.
ಈ ಹಿಂದೆ ಭಾರತ ತಂಡ 2005 ಮತ್ತು 2017ರಲ್ಲಿ ಪ್ರಶಸ್ತಿ ಸುತ್ತು ತಲುಪಿತ್ತು. ಇದೀಗ ಮೂರನೇ ಬಾರಿ ಫೈನಲ್ ಪ್ರವೇಶಿಸಿರುವ ಆತಿಥೇಯ ಭಾರತ ತಂಡವು, ಭಾನುವಾರ ನಡೆಯುವ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಯಾರೇ ಗೆದ್ದರೂ ಹೊಸ ಚಾಂಪಿಯನ್ ತಂಡ ಉದಯಿಸಲಿದೆ.

 


