ಪಾವಗಡ:
ಕೊವೀಡ್‍ನಲ್ಲಿ ವರ್ಷದ ಹಿಂದೆ ದಾಸ್ತಾನಿದ್ದ ದವಸ ಧಾನ್ಯಗಳು ಅಡುಗೆಗೆ
ತಾಲ್ಲೂಕಿನ ಬಿಸಿಎಂ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಆಹಾರ ತಯಾರಿಸುವ ಅಕ್ಕಿ-ಗೋಧಿಯಲ್ಲಿ ಹುಳುಗಳು ಬಿದ್ದಿದ್ದು, ಈ ಧಾನ್ಯಗಳನ್ನು ಬಳಸಿಯೇ ಅನ್ನ, ಚಪಾತಿ ತಯಾರಿಸಿ ಮಕ್ಕಳಿಗೆ ಊಟ ಬಡಿಸುತ್ತಿರುವ ಖಚಿತ ಮಾಹಿತಿ ತಿಳಿದು ತಹಶೀಲ್ದಾರ್ ಕೆ.ಆರ್.ನಾಗರಾಜ್ ಶುಕ್ರವಾರ ವಸತಿ ನಿಲಯಗಳಿಗೆ ದಿಢೀರನೆ ಭೇಟಿ ನೀಡಿ, ಅಕ್ಕಿ-ಗೋಧಿ ಪರೀಶಿಲಿಸಿ ಸಂಬಂಧಪಟ್ಟವರ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಲಯ ಪಾಲಕಿಗೆ ತರಾಟೆ :
ವಸತಿ ನಿಲಯದ ವಿದ್ಯಾರ್ಥಿಗಳು ಕಳಪೆ ಆಹಾರ ಕುರಿತು ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದು, ಪೋಷಕರು ತಹಶೀಲ್ದಾರ್ ಅವರ ಗಮನಕ್ಕೆ ತಂದಿದ್ದಾರೆ. ಆಗ ತಹಶೀಲ್ದಾರ್ ಕೆ.ಆರ್.ನಾಗರಾಜ್ ಮತ್ತು ಆಹಾರ ಇಲಾಖೆಯ ನೀರೀಕ್ಷಕರಾದ ಮಂಜುನಾಥ್, ನಾಗೇಂದ್ರ ತಂಡದೊಂದಿಗೆ ಏಕಕಾಲದಲ್ಲಿ ಪಟ್ಟಣದಲ್ಲಿ ದೂರವಾಣಿ ಕಚೇರಿ ಬಳಿ ಇರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ,
ನಿಲಯ ಪಾಲಕಿ ಶೋಭಾ ಅವರನ್ನು ಸ್ಥಳಕ್ಕೆ ಕರೆಯಿಸಿ ದಾಸ್ತಾನು ಕೊಠಡಿ ಪರೀಶಿಲಿಸಿದಾಗ ಅಕ್ಕಿ ಮತ್ತು ಗೋಧಿಯಲ್ಲಿ ಹುಳುಗಳು ಇದ್ದು ಚಿಟ್ಟೆಯಾಕಾರದಲ್ಲಿ ಮೂಟೆಗಳ ಮೇಲೆ ಓಡಾಡುವುದನ್ನು ಕಂಡು ತಹಶೀಲ್ದಾರ್ ನಿಲಯ ಪಾಲಕಿ ಶೋಭಾರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಎಲ್ಲೆಡೆ ಹುಳುಗಳ ದರ್ಶನ :
ಪಟ್ಟಣದ ಗುರು ಭವನದ ಪಕ್ಕದಲ್ಲಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ, ಪತಂಜಲಿ ನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ, ಬನಶಂಕರಿಯಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಗೆ ಭೇಟಿ ನೀಡಿ ಪರೀಶಿಲನೆ ನಡೆಸಿದಾಗ ಅಕ್ಕಿ, ಗೋಧಿಯಲ್ಲಿ ಹುಳುಗಳು ಕಂಡು ಬಂದಿದ್ದು, ನಿಲಯ ಪಾಲಕರಾದ ಮಂಜುನಾಥ್ ಅವರು ಅನ್ಯಕಾರ್ಯ ನಿಮಿತ್ತ ಪರ ಊರಿಗೆ ತೆರಳಿದ್ದಾರೆ ಎಂದು ಅಡುಗೆ ಸಿಬ್ಬಂದಿ ಮಾಹಿತಿ ನೀಡಿದರು.
ಅಧಿಕಾರಿಯಿಂದ ಅವ್ಯವಹಾರ…?:
ತಾಲ್ಲೂಕಿನಲ್ಲಿ 13 ವಸತಿ ನಿಲಯಗಳಿದ್ದು, ಎಲ್ಲಾ ಹಾಸ್ಟೆಲ್‍ಗಳಿಗೆ ನಿಲಯ ಪಾಲಕರಿಲ್ಲ. ತಾಲ್ಲೂಕು ಅಧಿಕಾರಿ ವೇದಮೂರ್ತಿ ಅವರು, ಮರಿದಾಸನಹಳ್ಳಿ, ಕಿಲಾರ್ಲಹಳ್ಳಿ, ಸಾಸಲಕುಂಟೆ, ರಂಗಸಮುದ್ರ, ಪಾವಗಡದಲ್ಲಿನ 5 ವಸತಿ ನಿಲಯಗಳ ಉಸ್ತುವಾರಿ ವಹಿಸಿಕೊಂಡಿದ್ದು, ಇಲ್ಲಿಯವರೆಗೂ ಈ ವಸತಿ ನಿಲಯಗಳಿಗೆ ಭೇಟಿ ನೀಡದೆ ಮಕ್ಕಳಿಗೆ ಹುಳು ಹಿಡಿದ ಆಹಾರ ನೀಡುತ್ತಿದ್ದು, ಈ ಅಧಿಕಾರಿ ದಾವಣಗೆರೆಯಿಂದ ತಿಂಗಳಿಗೊಮ್ಮೆ ಮಾತ್ರ ಪಾವಗಡ ತಾಲ್ಲೂಕು ಕಚೇರಿಗೆ ಆಗಮಿಸುತ್ತಿದ್ದು, ಆಹಾರ ಸಾಮಗ್ರಿಗಳನ್ನು ಸರಬರಾಜು ಮಾಡುವಲ್ಲಿ ಭಾರಿ ಅವ್ಯವಹಾರ ಎಸಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗಷ್ಟೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುಬ್ರಾನಾಯ್ಕ ಅವರು ಆಹಾರ ಸರಬರಾಜು ಟೆಂಡರ್‍ನಲ್ಲಿ ಅವ್ಯವಹಾರ ಎಸಗಿದ್ದಾರೆ ಎಂಬ ಅರೋಪದ ಹಿನ್ನಲೆಯಲ್ಲಿ ಅವರನ್ನು ಹಿಂದುಳಿದ ವರ್ಗಗಳ ಉನ್ನತಾಧಿಕಾರಿ ರಶ್ಮಿ ಮಹೇಶ್ ಅವರು ಅಮಾನತ್ತು ಗೊಳಿಸಿದ್ದಾರೆ.
ಜನ ಪ್ರತಿನಿಧಿಗಳು ಆಗಾಗ್ಗೆ ಭೇಟಿ ನೀಡಬೇಕು :
ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ತೆರೆದು, ಗುಣಮಟ್ಟದ ಆಹಾರ ನೀಡುವ ಆಶಯ ಹೊಂದಿದೆ. ಆದರೆ ಕೆಲ ಅಧಿಕಾರಿಗಳ ಕಾರ್ಯ ವೈಖರಿ, ನಿರ್ಲಕ್ಷ್ಯದಿಂದ ತಾಲ್ಲೂಕು ವಸತಿ ನಿಲಯಗಳಲ್ಲಿ ಭ್ರಷ್ಟಚಾರ ನಡೆಯುತ್ತಿದ್ದು, ತಿಂಗಳಿಗೆ ಒಮ್ಮೆಯಾದರೂ ಜನ ಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡ ಬೇಕು. ಇಲ್ಲದಿದ್ದರೆ ತಾಲ್ಲೂಕು ಮಟ್ಟದ ಅಧಿಕಾರಿಗಳೆ ಸುಪ್ರಿಂ ರೀತಿ ವರ್ತಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಳೆದ ವರ್ಷದ ಅಕ್ಕಿ, ಗೋಧಿ :
ಕಳೆದ ವರ್ಷ ಕೊರೊನಾ ಸಮಯದಲ್ಲಿ ವಸತಿ ನಿಲಯಗಳನ್ನು ಮುಚ್ಚಲಾಗಿತ್ತು. ಈ ಅವಧಿಯಲ್ಲಿ ಆಹಾರ ಪದಾರ್ಥಗಳನ್ನು ದಾಸ್ತಾನು ಮಾಡಲಾಗಿತ್ತು. ಕೋವಿಡ್ ನಂತರದಲ್ಲಿ ಪುನಃ ವಸತಿ ನಿಲಯಗಳನ್ನು ಪ್ರಾರಂಭಿಸಿದಾಗ ಸರ್ಕಾರದಿಂದ ಪೂರೈಕೆಯಾಗುವ ಹೊಸ ಆಹಾರ ಪದಾರ್ಥಗಳನ್ನು ಗೊಲ್‍ಮಾಲ್ ಮಾಡಿ ಬೇರೆಡೆಗೆ ಸಾಗಿಸಿ ಹಳೆಯ ಅಕ್ಕಿ, ಗೋಧಿಯನ್ನು ಈಗ ಬಳಸಿಕೊಳ್ಳಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಾಲ್ಲೂಕು ಬಿಸಿಎಂ ಅಧಿಕಾರಿ ವೇದಮೂರ್ತಿ ಅವರು ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿಲ್ಲ ಹಾಗೂ ತಾಲ್ಲೂಕು ಕೇಂದ್ರದಲ್ಲೂ ವಾಸ್ತವ್ಯ ಹೂಡಿಲ್ಲ. ವಸತಿ ನಿಲಯಗಳ ಉಸ್ತುವಾರಿಯನ್ನು ಸಮರ್ಪಕವಾಗಿ ನಿಬಾಯಿಸದೆ ಇರುವ ಮಾಹತಿ ಲಭ್ಯವಾಗಿದೆ. ಈ ಬಗ್ಗೆ ಉನ್ನತಾಧಿಕಾರಿಗಳ ಗಮನಕ್ಕೆ ತರಲಾಗುವುದು.
-ತ್ಯಾಗರಾಜು, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ (ಪ್ರಭಾರ)
ಕೂಡಲೆ ದಾಸ್ತಾನು ಇರುವ ಅಕ್ಕಿಯನ್ನು ಬದಲಾಯಿಸಲು ತಾಲ್ಲೂಕು ಅಧಿಕಾರಿ ವೇದಮೂರ್ತಿ ಸೂಚನೆ ನೀಡಲು ಅವರಿಗೆ ಕರೆ ಮಾಡುತ್ತಿದ್ದು, ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಘಟನೆಯು ಒಂದು ದುರಂತವಾಗಿದೆ. ಸರ್ಕಾರವು ಬಡ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳನ್ನು ತೆರೆದಿದೆ. ಆದರೇ ಕೆಲ ಅಧಿಕಾರಿಗಳು ಮಕ್ಕಳಿಗೆ ಅನ್ಯಾಯ ಎಸಗುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.
-ಕೆ.ಆರ್.ನಾಗರಾಜ್, ತಹಶೀಲ್ದಾರ್
ಹುಳು ಬಿದ್ದಿರುವ ಆಹಾರ ಧಾನ್ಯಗಳು 6 ತಿಂಗಳ ಹಳೆಯ ದಾಸ್ತಾನಾಗಿವೆ. ತಿಂಗಳಿಗೊಮ್ಮೆ ಸರಬರಾಜು ಮಾಡುವ ಅಕ್ಕಿ, ಗೋಧಿ ಏನಾಯಿತು ಎಂಬುದು ತನಿಖೆಯಿಂದ ಮಾತ್ರ ಸಾಧ್ಯ?
-ಮಂಜುನಾಥ್ ನಾಗೇಂದ್ರ, ಆಹಾರ ನಿರೀಕ್ಷಕರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
