ತುಮಕೂರು :
ಪೋಷಕರ ಆಕ್ರೋಶಕ್ಕೆ ಗುರಿಯಾದ ವಡ್ಡರಹಳ್ಳಿ ಶಾಲಾ ಶಿಕ್ಷಕಿ
ಹುಳು ಹಿಡಿದ ಆಹಾರಪದಾರ್ಥಗಳನ್ನು ಶಾಲೆಯ ಮಕ್ಕಳಿಗೆ ತಿನ್ನಿಸುತ್ತಿರುವ ಅಮಾನವೀಯ ಘಟನೆ ತುಮಕೂರು ನಗರ ಸಮೀಪದ ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು, ತಪ್ಪೆಂದು ತಿಳಿದಿದ್ದರೂಅದನ್ನೆ ಮಕ್ಕಳಿಗೆ ಉಣಬಡಿಸುತ್ತಿರುವ ಶಾಲಾ ಶಿಕ್ಷಕಿ ಕ್ರಮದ ಬಗ್ಗೆ ಮಕ್ಕಳ ಪೆÇೀಷಕರು ಮತ್ತು ಊರಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದುವಾರದಿಂದ ಶಾಲೆಯ ಬಿಸಿಯೂಟದಲ್ಲಿ ಹುಳುಗಳು ಕಂಡು ಬರುತ್ತಿದ್ದು ಮಕ್ಕಳಿಗೆ ಅದನ್ನೇ ನೀಡುತ್ತಿದ್ದಾರೆ. ಇದನ್ನು ತಿಂದ ಮಕ್ಕಳಿಗೆ ಹೊಟ್ಟೆ ನೋವು, ತಲೆನೋವು, ಜ್ವರ, ನೆಗಡಿ ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದರ ಬಗ್ಗೆ ಖುದ್ದಾಗಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಆಹಾರ ಪದಾರ್ಥಗಳಲ್ಲಿ ಹುಳುಗಳು ಇರುವುದು ಕಂಡುಬಂದಿದೆ ಎಂದು ಸ್ಥಳೀಯರಾದ ಅಪ್ಸರ್ ಅವರು ಆರೋಪಿಸಿದ್ದಾರೆ.
ಮನೆಗೆ ಊಟ ತಂದಿದ್ದರಿಂದ ಬೆಳಕಿಗೆ:
ಶಾಲೆಯ ವಿದ್ಯಾರ್ಥಿಯೊಬ್ಬನಿಗೆ ಕೈ ಮುರಿದು ಹೋಗಿದ್ದು ನೀನು ಊಟ ಮಾಡಲು ಆಗುವುದಿಲ್ಲ ಮನೆಗೆ ತೆಗೆದುಕೊಂಡು ಬಾ ನಾನು ಊಟ ಮಾಡಿಸುತ್ತೇನೆ ಎಂದು ಅವರ ತಾಯಿ ಹೇಳಿದ್ದರು. ಆ ಬಾಲಕ ಊಟವನ್ನು ಮನೆಗೆ ತೆಗೆದುಕೊಂಡು ಹೋಗಿದ್ದು ಇದನ್ನು ನೋಡಿದ ತಾಯಿ ಆಹಾರದಲ್ಲಿ ಹುಳುಗಳು ಇರುವುದು ಕಂಡು ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ ಎಂದು ಹೇಳಿದರು.
ತಾವೂ ತಿನ್ನದೆ ಮಕ್ಕಳಿಗೆ ಶಿಕ್ಷೆ:
ಅಡುಗೆಯವರು ಬೇಳೆ ಹುಳು ಆಗಿದೆ ಇದನ್ನು ಅಡುಗೆಗೆ ಬಳಸಲು ಆಗುವುದಿಲ್ಲ ಎಂದು ಶಿಕ್ಷಕಿ ಮಹಾಲಕ್ಷ್ಮಿ ಅವರ ಗಮನಕ್ಕೆ ತಂದರೆ ಇದೇ ಬೇಳೆ ಇರುವುದು ಅದನ್ನೆ ತೊಳೆದು ಹಾಕಿ ಎಂದು ಅವರಿಗೆ ಸಬೂಬು ಹೇಳಿ ಕಳುಹಿಸಿದ್ದಾರೆ. ಅಡುಗೆ ಮಾಡಿದ ನಂತರ ಶಿಕ್ಷಕರಾಗಲಿ, ಅಡುಗೆ ಮಾಡುವವರಾಗಲಿ ಊಟ ಮಾಡಿಲ್ಲ. ಬರಿ ಮಕ್ಕಳಿಗೆ ಮಾತ್ರ ಬಡಿಸಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ..? ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಇವರು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮಾಜಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ನರಸಿಂಹರಾಜು ಅವರು ಮಾತನಾಡಿ, ಶಾಲೆಯ ಮಕ್ಕಳಿಗೆ ಬಿಸಿಯೂಟದಲ್ಲಿ ಹುಳು ಹಿಡಿದ ದವಸಧಾನ್ಯಗಳನ್ನು ಬಳಸಿದ್ದು ತಪ್ಪು, ಇದರ ಜವಾಬ್ದಾರಿಯನ್ನು ಯಾರು ಹೊತ್ತುಕೊಳ್ಳಲು ಸಿದ್ದರಿಲ್ಲ. ಅಡುಗೆ ಮಾಡುವವರು ಶಿಕ್ಷಕರ ಮೇಲೆ, ಶಿಕ್ಷಕರು ಅಡುಗೆ ಮಾಡುವವರ ಮೇಲೆ ಒಬ್ಬರನ್ನೊಬ್ಬರು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳು ಎಲ್ಲರಿಗೂ ಮಕ್ಕಳೇ ಅವರ ಆರೋಗ್ಯ ಕಾಪಾಡಬೇಕಾದದ್ದು ಶಿಕ್ಷಕರ ಜವಾಬ್ದಾರಿ, ಈ ರೀತಿಯಾದಂತಹ ಉದಾಸೀನದ ಉತ್ತರವನ್ನು ನೀಡುತ್ತಾ ಅವರ ಜೀವದ ಜೊತೆ ಚೆಲ್ಲಾಟ ಆಡಬಾರದು. ಅಧಿಕಾರಿಗಳು ತಪ್ಪಿತಸ್ತರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆ ಜರುಗದಂತೆ ಎಚ್ಚರವಹಿಸಬೇಕು ಎಂದು ಒತ್ತಾಯ ಮಾಡಿದರು.
ಶಾಲೆಗೆ ಬಿಇಓ ಭೇಟಿ ಪರಿಶೀಲನೆ:
ಘಟನೆ ತಿಳಿದು ಸ್ಥಳಕ್ಕಾಗಮಿಸಿದ ತುಮಕೂರು ಬಿಇಒ ಹನುಮನಾಯಕ್ ಅವರು ಮಾತನಾಡಿ, ವಡ್ಡರಹಳ್ಳಿ ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹದ ಬಿಸಿಯೂಟದಲ್ಲಿ ಹುಳುಗಳು ಕಂಡುಬಂದಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಇದೀಗ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದೇವೆ, ಹಳೆಯ ಬೇಳೆ ಮತ್ತು ಅಕ್ಕಿಯಲ್ಲಿ ಹುಳುಗಳು ಕಂಡು ಬಂದಿವೆ. ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಲಾಗಿದೆ. ಈಗಾಗಲೇ ಊಟ ಮಾಡಿದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ವೈದ್ಯರನ್ನು ಕರೆಸಿ ತಪಾಸಣೆಗೆ ಸೂಚನೆಯನ್ನು ನೀಡಿದ್ದೇವೆ ಎಂದು ಹೇಳಿದರು.
ಲಾಕ್‍ಡೌನ್ ಸಂದರ್ಭದ ಬೇಳೆ ಬಳಸುತ್ತಿದ್ದ ಶಾಲೆ
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿಕ್ಷಕರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದನ್ನು ಸರ್ಕಾರದ ಗಮನಕ್ಕೆ ತಂದು ಆಹಾರಪದಾರ್ಥಗಳನ್ನು ವಾಪಸ್ ಕಳುಹಿಸಿ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳುತ್ತೇವೆ. ಈಗ ಬೇಳೆ ಸರಬರಾಜು ಆಗಿರಲಿಲ್ಲ, ಲಾಕ್ ಡೌನ್ ಸಂದರ್ಭದಲ್ಲಿ ಇದ್ದಂತಹ ಬೇಳೆಗಳನ್ನು ಬಳಸಿದ್ದಾರೆ. ಆದ್ದರಿಂದ ಇಂತಹ ತಪ್ಪು ನಡೆದಿದೆ.ಈ ಪ್ರಕರಣದಿಂದಾಗಿ ಎಚ್ಚೆತ್ತು ನಮ್ಮ ವ್ಯಾಪ್ತಿಗೆ ಬರುವಂತಹ ಎಲ್ಲಾ ಶಾಲೆಗಳಿಗೆ ನಿರ್ದೇಶನ ನೀಡಿದ್ದೇವೆ. ಈ ರೀತಿಯಾದಂತಹ ಹಾಳಾದ ಆಹಾರ ಪದಾರ್ಥಗಳು ಇದ್ದರೆ ತಕ್ಷಣವೇ ನಮ್ಮ ಗಮನಕ್ಕೆ ತರಬೇಕು. ಅಲ್ಲಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಒದಗಿಸಲಾಗುತ್ತದೆ. ಅದೆಲ್ಲ ಏನು ಇದ್ದರೂ ಕೂಡ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತಹ ಶಿಕ್ಷಕರು ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು ಎಂದು ಬಿಇಒ ಹನುಮನಾಯಕ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ