ಮುಂಬಯಿ
4ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಮುಕ್ತಾಯ ಬೆನ್ನಲ್ಲೇ ಇದೀಗ ಪಂದ್ಯಾವಳಿಯ ವೇಳಾಪಟ್ಟಿಯನ್ನು ಬಿಸಿಸಿಐ ಶನಿವಾರ ಪ್ರಕಟಿಸಿದೆ. ಜನವರಿ 9 ರಂದು ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುವ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿದೆ.
ಟೂರ್ನಿಯ ಮೊದಲ ಚರಣದ ಪಂದ್ಯಗಳು ಜನವರಿ 9 ರಿಂದ 17 ರವರೆಗೆ ನವಿ ಮುಂಬೈನಲ್ಲಿ ನಡೆಯಲಿದೆ. ನಂತರ ಎರಡನೇ ಚರಣದ ಜನವರಿ 19 ರಿಂದ ಫೆಬ್ರವರಿ 5 ರವರೆಗೆ ಬರೋಡಾದಲ್ಲಿ ನಡೆಯಲಿದೆ. ಫೈನಲ್ ಕೂಡ ಬರೋಡಾದಲ್ಲಿ ನಿಗದಿಯಾಗಿದೆ. ಲೀಗ್ ಹಂತದಲ್ಲಿ 20 ಪಂದ್ಯಗಳು ನಡೆಯಲಿದ್ದು, ಫೆಬ್ರವರಿ 3 ರಂದು ಎಲಿಮಿನೇಟರ್ ಮತ್ತು ಎರಡು ದಿನಗಳ ನಂತರ ಫೈನಲ್ ಪಂದ್ಯ ನಡೆಯಲಿದೆ.
ಮೆಗಾ ಹರಾಜಿನಲ್ಲಿ, 194 ಭಾರತೀಯ ಮತ್ತು 83 ವಿದೇಶಿ ಆಟಗಾರರು ಸೇರಿದಂತೆ 277 ಆಟಗಾರರು ಲಭ್ಯವಿದ್ದರು. ಈ ಪೈಕಿ ಒಟ್ಟು 67 ಮಂದಿ 5 ತಂಡಗಳಿಗೆ ಬಿಕರಿಯಾದರು. ಭಾರತದ ತಾರಾ ಆಲ್ರೌಂಡರ್ ದೀಪ್ತಿ ಶರ್ಮಾ 3.2 ಕೋಟಿ ರು.ಗೆ ಯು.ಪಿ.ವಾರಿಯರ್ಸ್ ತಂಡವನ್ನು ಸೇರಿಕೊಂಡರು. ಮುಂಬೈ ಇಂಡಿಯನ್ಸ್ ಹಾಲಿ ಚಾಂಪಿಯನ್ ಆಗಿದ್ದು, 2023 ರಲ್ಲಿ ಪ್ರಶಸ್ತಿಯನ್ನು ಗೆದ್ದಿದ್ದರೆ, 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟ್ರೋಫಿಯನ್ನು ತನ್ನದಾಗಿಸಿಕೊಂಡಿತ್ತು.








