ಸೋಶಿಯಲ್‌ ಮೀಡಿಯಾ ಎಕ್ಸ್‌ ಸ್ಥಗಿತ; ಬಳಕೆದಾರರ ಪರದಾಟ

ದೆಹಲಿ

      ಜನಪ್ರಿಯ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌, ವಿಶ್ವಾದ್ಯಂತ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಎಕ್ಸ್‌ (X) ಮಂಗಳವಾರ  ಕೆಲಹೊತ್ತು ಸ್ಥಗಿತಗೊಂಡಿತು . ಇದರಿಂದ ಹಲವು ಮಂದಿ ಬಳಕೆದಾರರು ಪರದಾಡಿದರು ಎಂದು ಸಮಸ್ಯೆಗಳ ಪತ್ತೆ ಹಚ್ಚುವ ಡೌನ್‌ಡಿಟೆಕ್ಟರ್‌ ವರದಿ ಮಾಡಿದೆ. ಅನೇಕ ಬಳಕೆದಾರರು ಇತರ ಸೋಶಿಯಲ್‌ ಮೀಡಿಯಾ ಫ್ಲಾಟ್‌ಫಾರ್ಮ್‌ ಮೂಲಕ ಈ ಬಗ್ಗೆ ಪ್ರಶ್ನಿಸಿದ್ದಾರೆ. ಡೌನ್‌ಡಿಟೆಕ್ಟರ್‌ ಪ್ರಕಾರ ಸಂಜೆ 5:03ರ ವೇಳೆಗೆ ಸುಮಾರು 988 ಭಾರತೀಯ ಬಳಕೆದಾರರು, 5:05ಕ್ಕೆ 11,320 ಬಳಕೆದಾರರು ತಮ್ಮ ಎಕ್ಸ್‌ ಖಾತೆ ಸ್ಥಗಿತಗೊಂಡಿರುವ ಬಗ್ಗೆ ಮಾಹಿತಿ ನೀಡಿದರು.

    ಸ್ಥಗಿತಗೊಂಡ ಎಕ್ಸ್‌ ಖಾತೆಯನ್ನು ಪುನಃಸ್ಥಾಪಿಸಲಾಯಿತು ಮತ್ತು ಕೆಲವು ಹೊತ್ತಿನಲ್ಲಿ ಮತ್ತೆ ಅದು ಸ್ಥಗಿತಗೊಂಡಿತು. ಪ್ರಪಂಚದಾದ್ಯಂತ ಅನೇಕ ಬಳಕೆದಾರರು ಈ ಸಮಸ್ಯೆ ಎದುರಿಸಿದ್ದಾರೆ. 

     ಎಕ್ಸ್‌ ಸರಿಯಾಗಿ ಕಾರ್ಯನಿರ್ವಹಿಸದಿರಲು ಕ್ಲೌಡ್‌ಫ್ಲೇರ್‌ನಲ್ಲಿನ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿದೆ. ಅದಾಗ್ಯೂ ಇನ್ನೂ ಈ ವಿಚಾರದ ಬಗ್ಗೆ ಅಧಿಕೃತರು ಯಾವುದೇ ಹೇಳಿಕೆ ನೀಡಿಲ್ಲ. “ಬಹು ಗ್ರಾಹಕರ ಮೇಲೆ ಪರಿಣಾಮ ಬೀರಿರುವ ಸಮಸ್ಯೆಯ ಬಗ್ಗೆ ತಿಳಿದಿದೆ ಮತ್ತು ತನಿಖೆ ನಡೆಸುತ್ತಿದೆ. ಡ್ಯಾಶ್‌ಬೋರ್ಡ್ ಮತ್ತು ಎಪಿಐ ಸಹ ವಿಫಲವಾಗಿದೆ” ಎಂದು ಕ್ಲೌಡ್‌ಫ್ಲೇರ್ ಹೇಳಿದೆ. “ಈ ಸಮಸ್ಯೆಯನ್ನು ಬಗೆಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಬರಲಿದೆ” ಎಂದು ತಿಳಿಸಿದೆ.

     ಕೆಲವು ಕಡೆ ಮುಂಜಾನೆ 1:30ರ ವೇಳೆಗೆ ಹಠಾತ್‌ ಸಮಸ್ಯೆ ಕಾಣಿಸಿಕೊಂಡಿತ್ತು. ಕ್ರಮೇಣ ಈ ಸಮಸ್ಯೆಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು ಎಂದು ವರದಿಗಳು ತಿಳಿಸಿವೆ. 

    ಎಕ್ಸ್‌ ಸ್ಥಗಿತಗೊಂಡ ಬೆನ್ನಲ್ಲೇ ಈ ಬಗ್ಗೆ ನೆಟ್ಟಿಗರು ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡರು. ಒಬ್ಬರು “ಎಕ್ಸ್‌ ಇದೀಗ 1 ನಿಮಿಷ ಡೌನ್ ಆಗಿತ್ತು. ಕ್ಲೌಡ್‌ಫ್ಲೇರ್‌ನಲ್ಲಿರುವ ಅದರ ಹೋಸ್ಟ್ ಸರ್ವರ್ ಕೂಡ ಡೌನ್ ಆಗಿತ್ತು” ಎಂದು ಪೋಸ್ಟ್ ಮಾಡಿದ್ದಾರೆ. ಮತ್ತೊಬ್ಬರು, “ಕ್ಲೌಡ್‌ಫ್ಲೇರ್ ಸಮಸ್ಯೆಗಳಿಂದಾಗಿ ಎಕ್ಸ್‌ ಡೌನ್ ಆಗಿರುವಂತೆ ತೋರುತ್ತಿದೆ. ಡೌನ್‌ಡೆಕ್ಟರ್‌ ಓಪನ್‌ ಮಾಡಲೂ ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.

     “ಎಕ್ಸ್‌ ಸೇರಿದಂತೆ ಹಲವು ವೆಬ್‌ಸೈಟ್‌ಗಳು ಡೌನ್ ಆಗಿವೆ. ಡೌನ್ ಡಿಟೆಕ್ಟರ್ ಕೂಡ ಡೌನ್ ಆಗಿತ್ತು” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಇದರೊಂದಿಗೆ ಹಲವು ಮೀಮ್ಸ್‌ಗಳು, ಟ್ರೋಲ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿವೆ. ಕೆಲವು ತಿಂಳ ಹಿಂದೆ ಭಾರತ, ಅಮೆರಿಕ ಸೇರಿದಂತೆ ವಿಶ್ವಾದ್ಯಂತ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೆಸೇಂಜರ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಹಲವು ಪರದಾಡಿದ್ದರು. ಹಲವು ಮಂದಿ ಬಳಕೆದಾರರು ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್‌ ಮಾಡಿದ್ದರು. ಅದಾಗಿ ಕೆಲವೇ ಹೊತ್ತಲ್ಲಿ ಸಮಸ್ಯೆ ನಿವಾರಣೆಯಾಗಿತ್ತು.

Recent Articles

spot_img

Related Stories

Share via
Copy link