ಯದುವೀರ್​ ನೇತೃತ್ವದ ಸಭೆ ಯಶಸ್ವಿ​: ಅರಮನೆ ಮುಂಭಾಗ ಪಾರಿವಾಳಗಳಿಗೆ ಕಾಳು ಹಾಕುವುದಕ್ಕೆ ಬ್ರೇಕ್..!

ಮೈಸೂರು:

    ಮೈಸೂರು ಅರಮನೆ ಮುಂಭಾಗದಲ್ಲಿ ಪಾರಿವಾಳಗಳಿಗೆ ಕಾಳು ಹಾಕುವ ವಿಚಾರ ಸಂಬಂಧ ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಭಾನುವಾರ ನಡೆಸಿದ ‘ಸಂಧಾನ ಸಭೆ’ ಯಶಸ್ವಿಯಾಗಿದ್ದು, ಪಾರಿವಾಳಗಳಿಗೆ ಆಹಾರ ನೀಡುವುದನ್ನ ನಿಲ್ಲಿಸುತ್ತೇವೆ ಎಂದು ಜೈನ ಸಂಘಟನೆ ತಿಳಿಸಿದೆ.

   ಪಾರಿವಾಳಗಳಿಗೆ ಆಹಾರ ಹಾಕುವ ಪದ್ದತಿ ರದ್ದತಿ ಮತ್ತು ಕಾಳು ಹಾಕುವುದರಿಂದ ಉದ್ಭವಿಸುವ ಸಮಸ್ಯೆಗಳ ವಿಚಾರವಾಗಿ ಇಂದು (ಸೆ.22) ಅರಮನೆಯ ಕೋಟೆ ಆಂಜನೇಯ ದೇವಸ್ಥಾನದ ಬಳಿ ನಾಗರೀಕರ ಜಾಗೃತ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯರು, ಪರಿಸರವಾದಿಗಳು, ಸಾಮಾಜಿಕ ತಜ್ಞರು ಸೇರಿ ಹಲವರು ಭಾಗಿಯಾಗಿದ್ದರು.

   ಸಭೆಯಲ್ಲಿ ಮಾತನಾಡಿದ ಜೈನ ಸಮುದಾಯದ ಮುಖಂಡ ಯಶ್ ವಿನೋದ್ ಜೈನ್, ಈಗಾಗಲೇ ನೀವೆಲ್ಲರೂ ಸಾಕಷ್ಟು ವಿಚಾರಗಳನ್ನ ಚರ್ಚೆ ಮಾಡಿದ್ದೀರಿ, ಪಾರಿವಾಳಗಳಿಂದ ಅರಮನೆ ಪ್ರತಿಮೆಗಳಿಗೆ ಆಗುತ್ತಿರುವ ಹಾನಿ ಬಗ್ಗೆ ತಿಳಿಸಿದ್ದೀರಿ. ಹೀಗಾಗಿ ನಾವು ಪಾರಿವಾಳಗಳಿಗೆ ಆಹಾರ ನೀಡುವುದನ್ನು ನಿಲ್ಲಿಸುತ್ತೇವೆ. ನಾವು ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ಭರವಸೆ ನೀಡಿದರು.

   ನಮ್ಮ ಸಮುದಾಯ ಪಾರಿವಾಳಗಳಿಗೆ ಆಹಾರ ನೀಡುವ ಸದುದ್ದೇಶದ ಕಾರ್ಯವು ಇಂತಹ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಸೋಮವಾರದಿಂದ, ನಾವು ಈ ಪದ್ಧತಿಯನ್ನು ನಿಲ್ಲಿಸುತ್ತೇವೆ, ಇತರ ಸಮುದಾಯದವರೂ ಕೂಡ ನಿಲ್ಲಿಸುವಂತೆ ಮನವಿ ಮಾಡಿಕೊಳ್ಳುತ್ತೇವೆಂದು ತಿಳಿಸಿದರು.ಸಭೆಯಲ್ಲಿ ವೈದ್ಯಕೀಯ ತಜ್ಞರಾದ ಡಾ ಮಧು ಮತ್ತು ಡಾ ಮುರಳಿ ಮೋಹನ್ ಅವರು, ಹೆಚ್ಚುತ್ತಿರುವ ಪಾರಿವಾಳಗಳ ಸಂತತಿಯಿಂದ ಉಂಟಾಗುವ ಆರೋಗ್ಯದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದರು.

   ಪಾರಿವಾಳಗಳನ್ನು ಆಕಾಶದ ಇಲಿಗಳು ಎಂದು ಕರೆಯಲಾಗುತ್ತದೆ. ಇಲಿಗಳಂತೆ ಪಾರಿವಾಳ ಸ್ವಾವಲಂಬಿ. ಇವುಗಳ ಸಂತತಿ ಹೆಚ್ಚಾದಷ್ಟು ಜೀವವೈವಿಧ್ಯಕ್ಕೆ ಹಾನಿಯಾಗುತ್ತದೆ. ಈ ಪಕ್ಷಗಳು ಕಾಗೆ ಹಾಗೂ ಮೈನಾಗಳಂತಹ ಪಕ್ಷಿ ಪ್ರಭೇದಗಳನ್ನು ಹೊರಹಾಕುತ್ತವೆ. ಅಲ್ಲದೆ, ನ್ಯುಮೋನಿಯಾ, ಆಸ್ತಮಾ ಮತ್ತು ಶ್ವಾಸಕೋಶದ ಕಾಯಿಲೆಗಳು ಸೇರಿದಂತೆ ಉಸಿರಾಟದ ಸಮಸ್ಯೆಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದರು.

   ಇತಿಹಾಸ ತಜ್ಞ ರಂಗರಾಜು ಅವರು ಮಾತನಾಡಿ, ಪಾರಿವಾಳಗಳ ಇಕ್ಕೆಯಿಂದ ಅರಮನೆ ಸುತ್ತಮುತ್ತಲ್ಲಿನ ಪ್ರತಿಮೆ, ಮತ್ತು ಅರಮನೆಗೆ ತೊಂದರೆಯಾಗುತ್ತಿದೆ. ಪಾರಿವಾಳಗಳಿಗೆ ಅರಮನೆ ಮುಂಭಾಗ ಆಹಾರ ನೀಡುವುದನ್ನು ನಿಲ್ಲಿಸಬೇಕು. ಪಾರಿವಾಳಗಳ ಇಕ್ಕೆಯಿಂದ ಬಿಡುಗಡೆಯಾಗುವ ಯೂರಿಕ್ ಆಸೀಡ್ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗುತ್ತದೆ. ಅರಮನೆ ಸುತ್ತಮುತ್ತಲಿನ ಮಹರಾಜರ ಪ್ರತಿಮೆಗಳ ಮೇಲೆ ಕುಳಿತು ಇಕ್ಕೆ ಹಾಕುವುದರಿಂದ ಪ್ರತಿಮೆ ಹಾಳಾಗುತ್ತದೆ. ಪಾರಿವಾಳ ತನ್ನ ಆಹಾರವನ್ನು ನೈಸರ್ಗಿಕವಾಗಿ ಹುಡುಕಿಕೊಳ್ಳುತ್ತದೆ. ಅವುಗಳಿಗೆ ಬರ್ತ್ ಡೇ, ವೆಡ್ಡಿಂಗ್, ಫೋಟೋ ಶೂಟ್ ನೆಪದಲ್ಲಿ ಆಹಾರ ನೀಡಿ ಪಾರಂಪರಿಕ ಕಟ್ಟಡಗಳಿಗೆ ಧಕ್ಕೆ ತರಬೇಡಿ ಎಂದು ಮನವಿ ಮಾಡಿದರು.

   ಸಂಸದ ಯದುವೀರ್ ಓಡೆಯರ್​ ಮಾತನಾಡಿ, ಬ್ಲೂ ರಾಕ್ ಪಾರಿವಾಳಗಳು ಸ್ಥಳೀಯ ಪಕ್ಷಿಗಳಲ್ಲ. ಅಲ್ಲದೆ, ಇವು ಸ್ವಾವಲಂಬಿಗಳಾಗಿದ್ದು, ಇವುಗಳಿಗೆ ಆಹಾರ ನೀಡುವ ಅಗತ್ಯವಿಲ್ಲ. ಈ ಪಾರಿವಾಳಗಳಿಗೆ ಆಹಾರ ನೀಡುವ ಪದ್ಧತಿ ನಗರದ ಪರಿಸರ ಸಮತೋಲನವನ್ನು ನಾಶಪಡಿಸುತ್ತದೆ ಎಂದು ಹೇಳಿದರು.

Recent Articles

spot_img

Related Stories

Share via
Copy link