ಮೈಸೂರು
ತಮ್ಮ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯುತ್ತಿರುವ ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಕಾಳುಮೆಣಸಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡುವುದನ್ನು ಮುಂದುವರಿಸುವಂತೆ ಮನವಿ ಮಾಡಿದ್ದರು. ಇದೀಗ ಮತ್ತೆ ಸಂಸದ ಯದುವೀರ್ ಒಡೆಯರ್ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್ ಅವರನ್ನು ಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿ ಆನೆ ಮತ್ತು ಮಾನವ ನಡುವೆ ನಡೆಯುತ್ತಿರುವ ಸಂಘರ್ಷ ತಪ್ಪಿಸುವ ಬಗ್ಗೆ ಚರ್ಚಿಸಿದ್ದಾರೆ.
ದೆಹಲಿಯ ಸಚಿವರ ಕಚೇರಿಯಲ್ಲಿ ಭೇಟಿ ಮಾಡಿ ಮೈಸೂರು ಕೊಡಗು ಭಾಗದಲ್ಲಿ ಆನೆ ಮತ್ತು ಮನುಷ್ಯರ ನಡುವಿನ ಸಂಘರ್ಷ ತಡೆಯಲು ಮನವಿ ಮಾಡಿದ್ದಾರೆ. ಕೃಷಿ ಭೂಮಿಯಲ್ಲಿ ಆನೆಗಳ ಚಲನ ವಲನ ತಡೆಗಟ್ಟಬೇಕು. ಕೃಷಿ ಭೂಮಿಯತ್ತ ಆನೆಗಳು ಬಾರದಂತೆ ದೊಡ್ಡ ರೈಲ್ವೆ ಬ್ಯಾರಿಕೇಡಿಂಗ್ ಅಳವಡಿಸುವಂತೆ ಮನವಿ ಪತ್ರ ಸಲ್ಲಿಸಿದ್ದಾರೆ.
ಮೈಸೂರು ಹಾಗೂ ಕೊಡಗು ಜಿಲ್ಲೆಯಲ್ಲಿ ಆನೆ ಮತ್ತು ಮಾನವ ಸಂಘರ್ಷ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಮನುಷ್ಯರ ಮೇಲೆ ಆನೆಗಳು ದಾಳಿ ಮಾಡುತ್ತಿರುವ ಬಗ್ಗೆ ಪ್ರತಿ ವಾರ ವರದಿಯಾಗುತ್ತಿದೆ. ಹಲವಾರು ಬಾರಿ ಗಾಯ ಹಾಗೂ ಪ್ರಾಣ ಹಾನಿ ಸಂಭವಿಸುತ್ತಿದೆ. ಆನೆಗಳು ನಾಡಿಗೆ ಲಗ್ಗೆ ಇಡುತ್ತಿರುವ ಪರಿಣಾಮ ದೊಡ್ಡ ಪ್ರಮಾಣದಲ್ಲಿ ಕಾಫಿ ತೋಟ ನಾಶವಾಗುತ್ತಿದೆ. ಹಾಗೂ ಕೃಷಿ ಬೆಳೆಗಳು ಹಾನಿಯಾಗುತ್ತಿವೆ. ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ಜನರ ಜೀವ ಕಾಪಾಡುವ ಅವಶ್ಯಕತೆ ಇದೆ ಎಂದು ಸಂಸದ ಯದುವೀರ್ ಸಚಿವರ ಗಮನ ಸೆಳೆದಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ ಮೈಸೂರು ವಿಮಾನ ನಿಲ್ದಾಣದಿಂದ ಹೊಸದಾಗಿ 5 ವಿಮಾನಗಳ ಮಾರ್ಗಗಳನ್ನು ವಿಸ್ತರಿಸುವಂತೆ ಕೋರಿ, ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡುಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದರು.