ಮೈಸೂರು :
ಮೈಸೂರು ದಸರಾ ಅಂಗವಾಗಿ ಸೋಮವಾರ ಅರಮನೆಯಲ್ಲಿ ರಾಜರ ಖಾಸಗಿ ದರ್ಬಾರ್ ಆರಂಭವಾಯಿತು. ಬೆಳಗ್ಗೆ 5.30ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿದ ನಂತರ, ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಶ್ರೀ ಚಾಮುಂಡಿ ತೊಟ್ಟಿಯಲ್ಲಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣ ಧಾರಣೆ ನೆರವೇರಿತು. ಇದಾದ ನಂತರ ವಾಣಿವಿಲಾಸ ಸನ್ನಿಧಾನದ ದೇವರ ಮನೆಯಲ್ಲಿ ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ಕಂಕಣ ಧಾರಣೆ ನೆರವೇರಿತು.
ಬಳಿಕ ಕಳಶ ಪೂಜೆ, ಸಿಂಹಾಸನಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ, ಎಣ್ಣೆ ಮಜ್ಜನ ಮುಗಿಸಿ ಬಂದ ಯದುವೀರ್‌ಗೆ ಪತ್ನಿ ತ್ರಿಷಿಕಾ ಕುಮಾರಿ ಆರತಿ ಬೆಳಗಿ, ಪಾದಪೂಜೆ ನೆರವೇರಿಸಿದರು. ಈ ವೇಳೆ ಪುತ್ರ ಆದ್ಯವೀರ್ ಇದ್ದರು. ನಂತರ, ದರ್ಬಾರ್ ಹಾಲ್‌ಗೆ ಆಗಮಿಸಿದ ಯದುವೀರ್, ಮಧ್ಯಾಹ್ನ 12.42 ರಿಂದ 12.58ರ ಒಳಗಿನ ಶುಭ ಲಗ್ನದಲ್ಲಿ ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, 11ನೇ ಬಾರಿಗೆ ಸಿಂಹಾಸನ ಅಲಂಕರಿಸುತ್ತಿದ್ದಂತೆಯೇ ಬಹುಪರಾಕ್ ಮೊಳಗಿತು.
ನಂತರ ಪುರೋಹಿತರಿಂದ ಧಾರ್ಮಿಕ ಪೂಜಾ ವಿಧಿಗಳು ನೆರವೇರಿದವು. ಗಜಪಡೆಯ ಏಕಲವ್ಯ ಮತ್ತು ಶ್ರೀಕಂಠ ಆನೆಗಳು ಅರಮನೆ ಖಾಸಗಿ ದರ್ಬಾರ್‌ನಲ್ಲಿ ಪಟ್ಟಣದ ಆನೆಗಳಾಗಿ ಭಾಗವಹಿಸಿದ್ದವು. ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.
ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಪ್ರಮುಖ ದೇವಸ್ಥಾನಗಳಲ್ಲಿ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿದ್ದು, ಮನೆಗಳಲ್ಲಿ ಸಂಪ್ರದಾಯಸ್ಥರು ನವರಾತ್ರಿ ಬೊಂಬೆ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದ್ದಾರೆ. ಅಶ್ವಯುಜ ಶುದ್ಧ ಪಾಡ್ಯಮಿಯಿಂದ ನವಮಿವರೆಗೆ ಅಂದರೆ ಒಂಬತ್ತು ದಿನಗಳ ಕಾಲ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ ದೇವಸ್ಥಾನಗಳಲ್ಲಿ ಕಲಶ ಸ್ಥಾಪನೆ ಮಾಡಿ ಹೋಮ ಹವನಾದಿಗಳನ್ನು ನೆರವೇರಿಸಲಾಯಿತು.
ಮನೆಗಳಲ್ಲಿ ಸಂಪ್ರದಾಯಸ್ಥರು ಬೊಂಬೆಗಳನ್ನು ಪ್ರತಿಷ್ಠಾಪಿಸಿದ್ದಾರೆ. ಮುಖ್ಯವಾಗಿ ಸಾಂಕೇತಿಕ ಆಚರಣೆ ಕಲಶ ಸ್ಥಾಪನೆ ಮಾಡಿ ದುರ್ಗೆಯನ್ನು ಪೂಜೆಗೆ ಆಹ್ವಾನಿಸಿ ಶೈಲಪುತ್ರಿ ದೇವಿಗೆ ಪೂಜೆ ಸಲ್ಲಿಸಲಾಯಿತು. ಬೊಂಬೆ ಪ್ರತಿಷ್ಠಾಪನೆ ಪೂಜೆಯನ್ನು ಘಟಸ್ಥಾಪನೆಯೊಂದಿಗೆ ಪ್ರಾರಂಭಿಸಲಾಯಿತು. ಮಹಿಳೆಯರು ದೇವಿಯನ್ನು ಆರಾಧಿಸಿ, ಆರತಿ ಮತ್ತು ನೈವೇದ್ಯ ಅರ್ಪಿಸಿ, ದುರ್ಗಾ ಸಪ್ತಶತಿ ಪಠಿಸಿದರು.








