ಚಿಕ್ಕಬಳ್ಳಾಪುರ :
ಗ್ಯಾರೆಂಟಿ ಯೋಜನೆ ಜಾರಿಯಾದ ದಿನದಿಂದ ಜಿಲ್ಲೆಯಲ್ಲಿ 7 ಕೋಟಿ 28 ಲಕ್ಷ 53 ಸಾವಿರದ 367 ಉಚಿತ ಟಿಕೆಟ್ ವಿತರಣೆ ಆಗಿದ್ದು ಈ ಬಾಬತ್ತು ಒಟ್ಟು 274,80,94,395.೦೦ ಕೋಟಿ ಹಣವನ್ನು ಸರಕಾರ ಕೆಎಸ್‌ಆರ್‌ಟಿಸಿ ನಿಗಮಕ್ಕೆ ನೀಡಿದೆ ಎಂದು ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್ ರಮೇಶ್ ತಿಳಿಸಿದರು.
ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್ಸಿಗೆ ಪೂಜೆ ಮಾಡಿ ಪ್ರಯಾಣಿಕರಿಗೆ ಉಚಿತ ಟಿಕೆಟ್ ವಿತರಣೆ ಮಾಡಿ ಸಿಹಿ ಹಂಚಿ ನಂತರ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.
ಶಕ್ತಿ ಯೋಜನೆಯು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವನ್ನು ಒದಗಿಸುವ ಮೂಲಕ ಆರ್ಥಿಕ ಸಬಲೀಕರಣದ ದಿಶೆಯಲ್ಲಿ ಮೈಲಿಗಲ್ಲು ಸಾಧಿಸಿದೆ. 2023ರ ಜೂನ್ 11ರಂದು ಆರಂಭಗೊಂಡ ಈ ಯೋಜನೆಯು ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟಾರೆ 500 ಕೋಟಿ ಉಚಿತ ಪ್ರಯಾಣಗಳನ್ನು ಇದೇ ತಿಂಗಳ 9ನೇ ತಾರೀಖಿನಂದು ಸಾಧಿಸಿದ ಹಿನ್ನೆಲೆಯಲ್ಲಿ ಇಂದು ರಾಜ್ಯಾದ್ಯಂತ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ನೀಡುವ ಜೊತೆಗೆ ಸಿಹಿ ಹಂಚಿ ಸಂಭ್ರಮವನ್ನು ಸರಳವಾಗಿ ಆಚರಿಸ ಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿಯೂ ಸಹ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸಿಹಿ ಹಂಚುವ ಜೊತೆಗೆ ಸುರಕ್ಷಿತ ಪ್ರಯಾಣಕ್ಕೆ ಕಾರಣನಾಗಿರುವ ಚಾಲಕರು ಮತ್ತು ನಿರ್ವಾಹಕರನ್ನು ಸನ್ಮಾನಿಸಲಾಗಿದೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಅಶ್ವಮೇದ ಮಾದರಿಯ ಒಂದು ಸಾವಿರ ಬಸ್‌ಗಳನ್ನು ಖರೀದಿಸುವ ಪ್ರಕ್ರಿಯೆಯು ಟೆಂಡರ್ ಹಂತದಲ್ಲಿದೆ ಎಂದು ಸಾರಿಗೆ ಸಚಿವರು ತಿಳಿಸಿದ್ದಾರೆ. ಸದ್ಯದಲ್ಲೆ ಹೊಸ ವಾಹನಗಳು ಎಲ್ಲಾ ಜಿಲ್ಲೆಗಳಿಗೆ ವಿತರಣೆಯಾಗಲಿವೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್ ರಮೇಶ್ ಅವರು ತಿಳಿಸಿದರು.
ರಾಜ್ಯ ಸರ್ಕಾರ ಘೋಷಿಸಿದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಮುಖ್ಯವಾದ ಶಕ್ತಿ ಯೋಜನೆಯಿಂದ ಜಿಲ್ಲೆಯಲ್ಲಿ ಇದುವರೆಗೂ 7,28,53,367 ಉಚಿತ ಟಿಕೆಟ್ ಗಳನ್ನು ಪಡೆದು ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಒಟ್ಟು 274,80,94,395.00 ರೂ ಗಳ ಹಣವನ್ನು ಸರ್ಕಾರ ಭರಿಸಿದೆ.ಶಕ್ತಿ ಯೋಜನೆ ಮಹಿಳೆಯರ ಸ್ವಾವಲಂಬನೆಯ ಕನಸುಗಳನ್ನು ನನಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಹಾಗೂ ಯೋಜನೆಯಿಂದ ಬಡ ಮತ್ತು ಮಧ್ಯಮ ಕುಟುಂಬಗಳ ಉದ್ಯೋಗಸ್ಥ ಮಹಿಳೆಯರಿಗೆ, ಶಾಲಾ ಕಾಲೇಜಿನ ವಿದ್ಯಾರ್ಥಿನಿಯರಿಗೆ, ತೃತೀಯ ಲಿಂಗಿಗಳಿಗೆ ಅನುಕೂಲವಾಗಿದೆ. ಪರೋಕ್ಷವಾಗಿ ಮುಜ ರಾಯಿ ಇಲಾಖೆಯ ದೇವಸ್ಥಾನಗಳಿಗೆ, ಪ್ರವಾಸಿ ತಾಣಗಳ ವ್ಯಾಪಾರಸ್ಥರಿಗೆ ಆರ್ಥಿಕ ಉತ್ತೇಜನ ನೀಡಿದೆ ಎಂದರು.
ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿ.ಬಸವರಾಜ್ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 616 ಸರ್ಕಾರಿ ಬಸ್‌ಗಳಿದ್ದು, 584 ಟ್ರಿಫ್‌ಗಳನ್ನು ಪ್ರತಿನಿತ್ಯ ಆಯೋಜಿಸ ಲಾಗುತ್ತಿದೆ. ಸಿಬ್ಬಂದಿ ಕೊರತೆಯನ್ನು ನೀಗಿಸಲು ಹೊಸದಾಗಿ ಚಿಕ್ಕಬಳ್ಳಾಪುರ ವಿಭಾಗಕ್ಕೆ 200 ಚಾಲಕ ಕಂ ನಿರ್ವಾಹಕರನ್ನು ಸರ್ಕಾರ ಒದಗಿಸಿದ್ದು, ಪ್ರಯಾಣಿಕರಿಗೆ ತೊಡಕಾಗ ದಂತೆ ವಾಹನ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹೆಚ್ಚು ಓಡಾಟದ ಒತ್ತಡವಿರುವ ಕಡೆಗೆ ಹೆಚ್ಚು ಬಸ್‌ಗಳನ್ನು ನಿಯೋಜಿಸಿ ಜಿಲ್ಲೆಯ ಸಾರ್ವಜನಿಕರಿಗೆ ಉತ್ತಮ ಬಸ್‌ಸೇವೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ರಾಮಕೃಷ್ಣಪ್ಪ, ಚಿಕ್ಕಬಳ್ಳಾಪುರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಜಯರಾಮ್, ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆ ನಾರಾಯಣ ಮ್ಮ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.








