ಬೆಂಗಳೂರು:
ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ನಿರಾಕರಿಸಿದ್ದರಿಂದ ನೊಂದು ಹೊಸಕೆರೆಹಳ್ಳಿಯ ಅವರ ಮನೆಯ ಮುಂಭಾಗ ಮಂಗಳವಾರ ಮಧ್ಯಾಹ್ನ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿ ರವಿ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾನೆ.
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು ಶೇ 80ರಷ್ಟು ಸುಟ್ಟ ಗಾಯಗಳಾಗಿದ್ದ ರವಿ ಮಧ್ಯರಾತ್ರಿ 1.30ಕ್ಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆಪಾವಗಡ ಮೂಲದ ರವಿ 4 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು ನೆಲಮಂಗಲ ತಾಲೂಕಿನ ಶಾಂತಿನಗರದಲ್ಲಿ ಮನೆ ಮಾಡಿಕೊಂಡು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಂಗಳವಾರ ತನ್ನ ನೆಚ್ಚಿನ ನಟ ಯಶ್ ಅವರ ಹುಟ್ಟುಹಬ್ಬವಿದ್ದ ಕಾರಣ ಅವರನ್ನು ಭೇಟಿ ಮಾಡಲು ಹೊಸಕೆರೆಹಳ್ಳಿ ಮನೆಗೆ ಆಗಮಿಸಿದ್ದನು.
ಮನೆಗೆ ಆಗಮಿಸಿದರೂ ಭೇಟಿಗೆ ಅವಕಾಶ ಸಿಗದಕ್ಕೆ ಯಶ್ ನಿವಾಸದ ಮುಂಭಾಗದಲ್ಲೇ ಪೆಟ್ರೋಲ್ ಸುರಿದುಕೊಂಡು ರವಿ ಆತ್ಮಹತ್ಯೆಗೆ ಯತ್ನಿಸಿದ್ದನು. ಮಣ್ಣು ಎರಚಿ ಬೆಂಕಿ ನಂದಿಸಿ ತಕ್ಷಣವೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು.
ಮಾಹಿತಿ ತಿಳೀಯುತ್ತಿದ್ದಂತೆಯೇ ಯಶ್ ಅವರು ವಿಕ್ಟೋರಿಯಾ ಆಸ್ಪತ್ರೆಗೆ ದೌಡಾಯಿಸಿ, ರವಿ ಆರೋಗ್ಯ ವಿಚಾರಿಸಿದ್ದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಯಶ್, ಇದೇ ಕೊನೆ. ಇನ್ನು ಮುಂದೆ ನನ್ನ ಅಭಿಮಾನಿಗಳು ಈ ರೀತಿಯ ದುಸ್ಸಾಹಸಕ್ಕೆ ಪ್ರಯತ್ನ ಪಟ್ಟರೆ ನಾನು ಮತ್ತೆ ಬರುವುದಿಲ್ಲ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದರು.
ಕ್ಷಮೆ ಕೇಳಿದ ಯಶ್
ಈ ಘಟನೆ ನಡೆದಾಗ ನಾನು ಮನೆಯಲ್ಲಿ ಇರಲಿಲ್ಲ. ಅಂಬರೀಶ್ ಅಣ್ಣ ನಮ್ಮ ಮಧ್ಯೆ ಇಲ್ಲ ಎನ್ನುವ ಕಾರಣಕ್ಕೆ ಹುಟ್ಟುಹಬ್ಬ ಆಚರಿಸುವುದಿಲ್ಲ ಎಂದು ಮೊದಲೇ ತಿಳಿಸಿದ್ದೆನು. ಪ್ರತಿ ವರ್ಷ ನಾನು ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದೆ. ನನಗೆ ಈಗ ಸ್ವಲ್ಪ ಹೊತ್ತಿನ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ವಿಷಯ ಗೊತ್ತಾಯಿತು. ವಿಚಾರ ಗೊತ್ತಾದ ತಕ್ಷಣವೇ ಆಸ್ಪತ್ರೆಗೆ ಬಂದೆ ಎಂದು ಹೇಳಿದ್ದರು.
ಡಾಕ್ಟರ್ ಡ್ರೆಸ್ಸಿಂಗ್ ಮಾಡುವ ವೇಳೆ ಈಗಲಾದರೂ ಯಶ್ ಬರುತ್ತಾರಾ ಎಂದು ರವಿ ಕೇಳಿದ್ದರಂತೆ. ಅವರ ತಂದೆಗೆ ನಾನು ಕ್ಷಮೆ ಕೇಳಿದೆ. ಆಗ ಅವರು ಕೂಡ ನೀವೇನು ಮಾಡ್ತೀರಾ ಬಿಡಿ ನಮ್ಮ ಹಣೆಬರಹ ಎಂದಿದ್ದರು ರವಿ ಅವರ ಶೇ.80 ರಷ್ಟು ದೇಹ ಸುಟ್ಟು ಹೋಗಿದ್ದ ವಿಚಾರ ಕೇಳಿ ತುಂಬಾ ಭಯ ಆಯ್ತು. ಇನ್ನು ಯಾರೇ ಅಭಿಮಾನಿಗಳು ಈ ರೀತಿ ಮಾಡಿಕೊಂಡರೆ ನಾನಂತೂ ಬರುವುದಿಲ್ಲ. ಸಿನಿಮಾ ನೋಡಿ ನಮ್ಮಿಂದ ಏನಾದರೂ ಒಳ್ಳೆಯದನ್ನು ಕಲಿತುಕೊಳ್ಳಿ. ಇಂತಹ ಘಟನೆಗಳನ್ನು ಮಾಡಿಕೊಳ್ಳಬೇಡಿ ಎಂದು ಯಶ್ ಅಭಿಮಾನಿಗಳಲ್ಲಿ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದರು
ಮನೆಗೆ ಆಧಾರವಾಗಿದ್ದ
ಮನೆಗೆ ಆಧಾರವಾಗಿದ್ದ ಮಗ ಇಲ್ಲವಾಗಿದ್ದಾನೆ,ಮನೆಯ ಸಂಸಾರ ಅವನಿಂದಲೇ ನಡೆಯುತ್ತಿತ್ತು ಎಂದು ತಂದೆ ರಾಮಣ್ಣ ಪುತ್ರ ರವಿಯನ್ನು ನೆನೆದು ಕಣ್ಣೀರಿಟ್ಟಿದ್ದಾರೆ ರವಿ ಗಾರೆ ಕೆಲಸದ ಕೆಲಸ ಮಾಡುತ್ತಿದ್ದ. ಮಂಗಳವಾರ ಮನೆಯಲ್ಲಿಯೇ ಇದ್ದ ಊಟ ಮುಗಿದ ಬಳಿಕ ಯಶ್ ಮನೆಗೆ ಹೋಗುತ್ತೇನೆ ಎಂದು ಹೇಳಿದ್ದ ನಾವು ಬೇಡ ಅಂದಿದ್ದರೂ ಹೋಗಿದ್ದಾನೆ ಆದರೆ ಪೆಟ್ರೋಲ್ ಎಲ್ಲಿ ತಗೆದುಕೊಂಡಿದ್ದಾನೋ ಗೊತ್ತಿಲ್ಲ ಎಂದು ಹೇಳಿದರು.
ಚಿಕಿತ್ಸೆ ಪಡೆಯುತ್ತಿದ್ದ ರವಿಯನ್ನು ಭೇಟಿ ಮಾಡಿದಾಗ ಕೈ ಕುಲುಕಿ ಬರ್ತ್ ಢೇ ಅಣ್ಣ ಎಂದು ವಿಶ್ ಮಾಡಿದ್ದ.ಆಗ ಯಶ್ ಏನು ಅಗಲ್ಲ ಎಂದು ಧೈರ್ಯಹೇಳಿದ್ದರು. ನಮಗೂ ಏನು ಅಗಲ್ಲ ಎಂದು ಯಶ್ ಧೈರ್ಯ ತುಂಬಿದ್ದರು ಆದರೆ ರವಿ ರಾತ್ರಿ ಸಾವನ್ನಪ್ಪಿದ್ದಾನೆ ಎಂದು ತಂದೆ ರಾಮಣ್ಣ ತಿಳಿಸಿದ್ದಾರೆ.
ರವಿ `ಕೆಜಿಎಫ್’ ಸಿನಿಮಾ ನೋಡುವುದ್ದಕ್ಕೆ ನಾಲ್ಕು ಟಿಕೆಟ್ ಬುಕ್ ಮಾಡಿದ್ದ. ಅವನು ಅವರ ಅಮ್ಮ ಹಾಗೂ ನನ್ನನ್ನು ಕರೆದುಕೊಂಡು ಹೋಗುತ್ತೇನೆ ಬನ್ನಿ ಎಂದು ಹೇಳಿದ್ದ.ಆಗ ನಾವು ಬೇಡ ಜನ ಜಾಸ್ತಿ ಇರುತ್ತಾರೆ. ಇನ್ನೊಮ್ಮೆ ಹೋಗೋಣ ಎಂದು ಹೇಳಿದ್ದರಿಂದ ತನ್ನ ಸ್ನೇಹಿತರನ್ನು ಕರೆದುಕೊಂಡು ಹೋಗಿ ಸಿನಿಮಾವನ್ನು ನೋಡಿಕೊಂಡು ಬಂದಿದ್ದ ಎಂದು ಹೇಳಿದರು.
ಪ್ರತಿ ವರ್ಷ ಯಶ್ ಹುಟ್ಟುಹಬ್ಬಕ್ಕೆ ಹೋಗುತ್ತಿದ್ದನು. ಅಲ್ಲದೇ ಕಳೆದ ವರ್ಷ ನಮ್ಮನ್ನು ಯಶ್ ಮನೆ ಹತ್ತಿರ ಕರೆದುಕೊಂಡು ಹೋಗಿದ್ದ. ನಾವು ಹೊರಗಡೆ ನಿಂತು ಯಶ್ ಅವರನ್ನು ನೋಡಿ ಅಲ್ಲಿಂದ ಹೊರಟು ಹೋಗಿದ್ದೇವು. ನನ್ನ ಕಾಲು ಸರಿಯಿಲ್ಲದ ಕಾರಣ ಎಲ್ಲೂ ಕೆಲಸಕ್ಕೆ ಹೋಗುತ್ತಿಲ್ಲ. ನನಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಮದುವೆಯಾಗಿ ಬೇರೆ ಹೋಗಿದ್ದಾನೆ. ಮನೆಗೆ ಆಧಾರವಾಗಿದ್ದ ಮಗ ಇಲ್ಲವಾಗಿದ್ದಾನೆ. ಮನೆಯ ಸಂಸಾರ ರವಿಯಿಂದಲೇ ನಡೆಯುತ್ತಿತ್ತು ಎಂದು ದು:ಖ ತೋಡಿಕೊಂಡರು.ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರವಿ ಪ್ರಕರಣವನ್ನು ಅಸಹಜ ಸಾವು ಅಡಿಯಲ್ಲಿ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
