ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾರಿಂದಾಗುವ ಲಾಭವನ್ನು ವಿವರಿಸಿದ ಯಶಸ್ವಿ ಜೈಸ್ವಾಲ್!

ಮುಂಬೈ:

     ಆಧುನಿಕ ಕ್ರಿಕೆಟ್‌ ದಿಗ್ಗಜರಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ  ಅವರು ಅಂತಾರಾಷ್ಟ್ರೀಯ ಟಿ20 ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ಇದರ ನಡುವೆ ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ , ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಉಪಸ್ಥಿತಿಯಿಂದ ಏಕದಿನ ತಂಡ ಪ್ರೇರಣೆಯಾಗುತ್ತಿದೆ, ಅವರು ಕಿರಿಯ ಆಟಗಾರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಹಾಗೂ ಅವರ ಅನುಭವ ಮತ್ತು ಪರಿಣಿತಿಯಿಂದ ನಾವು ಪ್ರೇರಿತರಾಗುತ್ತೇವೆ ಎಂದು ಹೇಳಿದ್ದಾರೆ.

    ವಿಶಾಖಪಟ್ಟಣದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಜೈಸ್ವಾಲ್‌ ಶತಕ ಬಾರಿಸಿ ಮಿಂಚಿದ್ದರು. ವಿರಾಟ್‌ ಕೊಹ್ಲಿಯವರ ಜೊತೆಗೂಡಿ ಜೈಸ್ವಾಲ್‌ ಅದ್ಭುತ ಜೊತೆಯಾಟವಾಡಿದ್ದರು. ಈ ಕುರಿತು ಮಾತನಾಡಿರುವ ಟೀಮ್‌ ಇಂಡಿಯಾ ಆಟಗಾರ ಯಶಸ್ವಿ ಜೈಸ್ವಾಲ್‌, “ರೋಹಿತ್ ಮತ್ತು ವಿರಾಟ್ ಭಾರತ ತಂಡದಲ್ಲಿ ಇರುವುದು ತುಂಬಾ ನೆರವು ನೀಡುತ್ತದೆ. ಅವರು ಡ್ರೆಸ್ಸಿಂಗ್ ಕೋಣೆಯಲ್ಲಿ ಚರ್ಚಿಸುವ ವಿಷಯಗಳಿಂದಲೇ ಆಟದ ಬಗ್ಗೆ ಕಲಿಯುತ್ತೇವೆ. ಅವರನ್ನು ನೋಡುವ ಮೂಲಕ ನಮಗೆ ಪ್ರೇರಣೆ ಸಿಗುತ್ತದೆ.

    ಅವರು ಹಲವು ವರ್ಷಗಳಿಂದ ಹೆಚ್ಚಿನ ತೀವ್ರತೆಯಿಂದ ಆಡಿದ ರೀತಿ ನಮಗೆ ಪ್ರೇರಣೆ ನೀಡುತ್ತದೆ. ಅವರು ನಮಗೆ ಸಹೋದರರಂತೆ ಕಲಿಸುತ್ತಾರೆ. ಕ್ರಿಕೆಟಿಗನಾಗಿ ಮಾತ್ರವಲ್ಲದೆ, ಹಿರಿಯರಾಗಿ ತಪ್ಪುಗಳನ್ನು ಮಾಡಬೇಡಿ ಎಂದು ಅವರು ನಮಗೆ ತಿಳಿ ಹೇಳುತ್ತಾರೆ. ರೋಹಿತ್ ಭಾಯ್ ನಮ್ಮನ್ನು ಬೈಯುತ್ತಾರೆ ಆದರೆ ಅಷ್ಟೇ ಪ್ರೀತಿಸುತ್ತಾರೆ. ಅವರು ನಮ್ಮನ್ನು ಬೈಯುತ್ತಿದ್ದರೆ, ಅವರು ನಮ್ಮ ಒಳ್ಳೆಯದಕ್ಕೆ ಹಾರೈಸುತ್ತಾರೆ ಎಂದರ್ಥ,” ಎಂದು ತಿಳಿಸಿದ್ದಾರೆ. ಟಿ20 ವಿಶ್ವಕಪ್‌ ಆಡುವುದು ನನ್ನ ಬಹುದಿನದ ಕನಸು ಹಾಗೂ ನಾಯಕತ್ವದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ತಂಡವನ್ನು ಮುನ್ನಡೆಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

   “ಟಿ20 ವಿಶ್ವಕಪ್ ಆಡುವುದು ನನ್ನ ಕನಸು, ಆದರೆ ನಾನು ನನ್ನ ಆಟದ ಮೇಲೆ ಗಮನಹರಿಸಲು ಪ್ರಯತ್ನಿಸುತ್ತೇನೆ ಮತ್ತು ನನ್ನ ಸಮಯಕ್ಕಾಗಿ ಕಾಯುತ್ತೇನೆ. ಹೌದು, ನನಗೆ ಅವಕಾಶ ಸಿಕ್ಕರೆ, ನಾನು ಭಾರತವನ್ನು ಮುನ್ನಡೆಸಲು ಇಷ್ಟಪಡುತ್ತೇನೆ,” ಎಂದು ಎಡಗೈ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ. ಜನವರಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿಯವರು ಆಡಲಿದ್ದಾರೆ. ಅದಕ್ಕೂ ಮುನ್ನ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಯಲ್ಲಿ ರೋಹಿತ್‌ ಶರ್ಮಾ ಕಾಣಿಸಿಕೊಳ್ಳಬಹುದು.‌ 

1.ಭಾರತ vs ನ್ಯೂಜಿಲೆಂಡ್‌- ಜನವರಿ 11ರಂದು ವಡೋದರ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.

2.ಭಾರತ vs ನ್ಯೂಜಿಲೆಂಡ್- ಜನವರಿ 18ರಂದು ಇಂದೋರ್‌ನ ಹೋಳ್ಕರ್‌ ಸ್ಟೇಡಿಯಂನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದೆ.

3.ಭಾರತ vs ನ್ಯೂಜಿಲೆಂಡ್- ಜನವರಿ 23ರಂದು ರಾಯ್ಪುರದ ಶಾಹಿದ್‌ ವೀರ್‌ ನಾರಾಯಣ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ನಡೆಯಲಿದೆ.

Recent Articles

spot_img

Related Stories

Share via
Copy link