ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಯತ್ನಾಳ್‌ …!

ಬೆಂಗಳೂರು: 

   ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತರೇ ಅಲ್ಲ. ಅವರು ಬಳೆಗಾರ ಶೆಟ್ಟರು. ಅವರ ಹುಟ್ಟೂರಾದ ಮಂಡ್ಯದ ಬೂಕನಕೆರೆಗೆ ಹೋಗಿ ಕೇಳಿದರೆ, ನಿಜ ಗೊತ್ತಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.

  ಸುದ್ದಿಗಾರರ ಜತೆ ಮಾತನಾಡಿದ ಅವರು, ವೀರೇಂದ್ರ ಪಾಟೀಲ, ಜೆ.ಎಚ್‌.ಪಟೇಲ್‌ ನಂತರ ಸಮುದಾಯದಲ್ಲಿ ಯಾರೂ ನಾಯಕರು ಇರಲಿಲ್ಲ. ಜನರು ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಒಪ್ಪಿದರು. ಆದರೆ ಅವರು ವೀರಶೈವರು ಮತ್ತು ಪಂಚಮಸಾಲಿಗಳಿಗೆ ಮೀಸಲಾತಿ ನೀಡದೆ, ಮೋಸ ಮಾಡಿದರು ಎಂದರು.

   ಯಡಿಯೂರಪ್ಪ ಲಿಂಗಾಯತರ ಹೆಸರಿನಲ್ಲಿ ಬಿಜೆಪಿಯನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ ಅನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ. ನಮ್ಮ ಆಕ್ಷೇಪ ಇರುವುದು ಕುಟುಂಬ ರಾಜಕಾರಣದ ಬಗ್ಗೆ ಮಾತ್ರ. ನರೇಂದ್ರ ಮೋದಿ ಸಹ ಕುಟುಂಬ ರಾಜಕಾರಣ ಒಪ್ಪುವುದಿಲ್ಲ ಎಂದರು.

  ರೇಣುಕಾಚಾರ್ಯ ಅವರು ತಮ್ಮನ್ನು ನಾಯಿ ನರಿ ಎಂದಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಯಿಗಳಿಗೆ ನಿಯತ್ತು ಇದೆ. ಆದರೆ ಹಂದಿಗಳಿಗೆ ನಿಯತ್ತು ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ರೇಣುಕಾಚಾರ್ಯ ಇಂದು ಮಾತನಾಡುತ್ತಿದ್ದಾರೆ. ಆದರೆ, ಅಂದು ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಗೋವಾಗೆ ಹೋಗಿ ಸಂಚು ಮಾಡಿದ್ದು ಇದೇ ರೇಣುಕಾಚಾರ್ಯ ಎಂದರು.

   ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ವಿಚಾರಕ್ಕೆ ಹೈಕಮಾಂಡ್‌ ಯಥಾಸ್ಥಿತಿ ಕಾಪಾಡಲು ತೀರ್ಮಾನಿಸಿದೆ. ಇದು ನಮ್ಮ ಶ್ರಮದ ಫ‌ಲ ಅಲ್ಲವೇ? ನಮ್ಮಲ್ಲಿ ಜನಪರ ವಿಚಾರಗಳಲ್ಲಿ ಭಿನ್ನಮತ ಇಲ್ಲ. ಕುಟುಂಬ ರಾಜಕಾರಣ, ಭ್ರಷ್ಟಾಚಾರದ ಕುಟುಂಬವನ್ನು ದೂರ ಇಡುವುದಷ್ಟೇ ನಮ್ಮ ಭಿನ್ನಮತಕ್ಕೆ ಕಾರಣ. ಕೆಪಿಎಸ್ಸಿ ವಿಚಾರದಲ್ಲಿ ನಾವು ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.