ರಾಯಚೂರು:
ಲಿಂಗಸುಗೂರಿನಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ವ್ಯಕ್ತಿಯೋರ್ವ ಕುಡಿದ ನಶೆಯಲ್ಲಿ ಮಚ್ಚು ಹಿಡಿದುಕೊಂಡು ಬಂದು ಆತಂಕ ಸೃಷ್ಟಿಸಿದ ಘಟನೆ ಭಾನುವಾರ ನಡೆದಿದೆ.ಲಿಂಗಸುಗೂರು ಪಟ್ಟಣದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮದ್ಯ ಸೇವಿಸಿದ ಆರೋಪಿ ಶ್ರೀನಿವಾಸ ಪೂಜಾರಿ ಎಂಬ ವ್ಯಕ್ತಿ ತನ್ನ ಅಂಗಿಯೊಳಗೆ ಮಚ್ಚು ಇಟ್ಟುಕೊಂಡು ಬಂದಿದ್ದನು. ಪೊಲೀಸರು ಪರಿಶೀಲಿಸಿದಾಗ ಮಚ್ಚು ತಂದಿದ್ದು ತಿಳಿದು ಬಂದಿದೆ.
ಹುಸೇನ ಬಾಷಾ ಎಂಬುವನಿಗೆ ಆರೋಪಿ ಶ್ರೀನಿವಾಸ ಪೂಜಾರಿ ಸಾಲ ನೀಡಿದ್ದ ಎನ್ನಲಾಗಿದೆ. ಕುಡಿದ ನಶೆಯಲ್ಲಿ ಆತನನ್ನು ಹುಡುಕುತ್ತಾ ಈ ಕಾರ್ಯಕ್ರಮಕ್ಕೆ ಬಂದಿದ್ದ ಎನ್ನಲಾಗಿದೆ. ಆದರೆ ಆತನಲ್ಲಿದ್ದ ಮಚ್ಚು ನೋಡಿದ ಅಲ್ಲಿದ್ದವರು ಆತಂಕಕ್ಕಿಡಾದರು. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಪುಟ್ಟಮಾದಯ್ಯ ತಿಳಿಸಿದ್ದಾರೆ.
