ಬೆಂಗಳೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ನಡೆದಿರುವ ಪರ್ಯಾಯ ಪ್ಲಾಟ್ ಹಗರಣದ ಕುರಿತು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜರಿಯಾ ಅವರಿಗೆ ಪತ್ರ ಬರೆದಿದ್ದಾರೆ.
ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಫಲಾನುಭವಿಯಾಗಿದ್ದು, ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಲು ಹಗರಣದ ಕಾನೂನು ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ.
ನಿಷ್ಪಕ್ಷಪಾತ ಮತ್ತು ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ಗೌರವಾನ್ವಿತ ಉಚ್ಚ ನ್ಯಾಯಾಲಯ ಪ್ರಕರಣದ ತನಿಖೆಯ ಮೇಲ್ವಿಚಾರಣೆ ವಹಿಸಿಕೊಳ್ಳಬೇಕು ಎಂದು ವಿನಂತಿಸುತ್ತೇನೆ. ನಿಮ್ಮ ಮಾರ್ಗದರ್ಶನದಲ್ಲಿ ನ್ಯಾಯವು ಮೇಲುಗೈ ಸಾಧಿಸುತ್ತದೆ ಮತ್ತು ನಾಗರಿಕರ ಹಕ್ಕುಗಳನ್ನು ಎತ್ತಿಹಿಡಿಯುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಯತ್ನಾಳ್ ಹೇಳಿದ್ದಾರೆ. ಮೈಸೂರು ನಗರದ ವಿಜಯನಗರದ ಮೂರು ಮತ್ತು ನಾಲ್ಕನೇ ಹಂತಗಳಲ್ಲಿ ಪ್ರಮುಖ ಆಸ್ತಿ ಸೇರಿದಂತೆ 3,000ಕ್ಕೂ ಹೆಚ್ಚು ನಿವೇಶನಗಳನ್ನು(ಸೈಟ್‌ಗಳು) ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ವಿಜಯನಗರ ಮೂರನೇ ಹಂತದಲ್ಲಿ 50×80 ಅಡಿಯ 5 ಮತ್ತು 60×40 ಅಡಿ ವಿಸ್ತೀರ್ಣದ 2 ನಿವೇಶನಗಳು ಹಾಗೂ 60×40 ಅಡಿ ವಿಸ್ತೀರ್ಣದ ಐದು ನಿವೇಶನಗಳು ಸೇರಿ 14 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ ಎಂದು ವಿಜಯಪುರ ಬಿಜೆಪಿ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಸಂಪುಟದ ಸಚಿವರೊಬ್ಬರು ಮುಡಾದಲಿದ್ದ ಸಂಬಂಧಿಸಿದ ಎಲ್ಲಾ ಕಡತಗಳನ್ನು ಬೆಂಗಳೂರಿಗೆ ಕೊಂಡೊಯ್ದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಇದು ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಪ್ರಯತ್ನವಾಗಿದೆ ಎಂದು ತೋರುತ್ತದೆ.
50:50 ಹಂಚಿಕೆ ಪರಿಹಾರ ಯೋಜನೆಯನ್ನು ರದ್ದುಗೊಳಿಸಿದ 27.10.2023 ರ ಸರ್ಕಾರದ ಅಧಿಸೂಚನೆಯ ಹೊರತಾಗಿಯೂ, ಮೈಸೂರಿನ ವಿಜಯನಗರ 3ನೇ ಹಂತ, ಇ ಬ್ಲಾಕ್ ಮತ್ತು ವಿಜಯನಗರ 4ನೇ ಹಂತದಲ್ಲಿರುವ ಈ ಬೆಲೆಬಾಳುವ ನಿವೇಶನಗಳನ್ನು ಮುಖ್ಯಮಂತ್ರಿಯವರ ಪತ್ನಿಗೆ ಮಂಜೂರು ಮಾಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಎಂದು ಯತ್ನಾಳ್ ಆರೋಪಿಸಿದ್ದಾರೆ.








