ಬೆಂಗಳೂರು:
ಬಿಜೆಪಿ ನಾಯಕರ ಬಗ್ಗೆ, ಬಿಜೆಪಿ ಪಕ್ಷದ ಬಗ್ಗೆ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಾ, ಬಂಡಾಯವೆದ್ದಿರುವಂತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ಶೋಕಾಸ್ ನೋಟಿಸ್ ನೀಡಿ ಬಿಗ್ ಶಾಕ್ ನೀಡಿದೆ. ಈ ಬೆನ್ನಲ್ಲೇ ಕೇಂದ್ರ ವರಿಷ್ಠರು ಯತ್ನಾಳ್ ಕುರಿತು ಅಭಿಪ್ರಾಯವನ್ನು ಪಡೆಯಲು ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ದೆಹಲಿಗೆ ಬರಲು ತಿಳಿಸಿದ್ದಾರೆ. ಹೀಗಾಗಿ ಆರ್ ಅಶೋಕ್ ಅವರು ದೆಹಲಿಗೆ ತೆರಳಿದ್ದು ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ.
ವಕ್ಪ್ ವಿಚಾರವಾಗಿ ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರಗೆ ಸೆಡ್ಡು ಹೊಡೆದಿರುವ ಯತ್ನಾಳ್ ಬಣ, ಸಮರ ಮುಂದುವರೆಸಿದೆ. ಅಲ್ಲದೆ ಬಿಜೆಪಿಯ ಕೆಲ ನಾಯಕರು ಯತ್ನಾಳ್ ಬೆಂಬಲಕ್ಕೆ ನಿಂತಿದ್ದಾರೆ. ಯತ್ನಾಳ್ ರನ್ನು ಉಚ್ಚಾಟನೆ ಮಾಡದಂತೆ ಬಿಜೆಪಿಯೊಳಗಿನ ಒಂದು ಬಣ ಹೇಳುತ್ತಿದೆ. ದೆಹಲಿಯಲ್ಲಿ ಕೆಲ ನಾಯಕರಿಂದ ಯತ್ನಾಳ್ ಉಚ್ಚಾಟನೆಗೆ ವಿರೋಧ ವ್ಯಕ್ತವಾಗಿದೆ. ಇದರಿಂದ ಸಹಜವಾಗಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಆಘಾತವಾಗಿದೆ. ಈ ನಡುವೆ ಯತ್ನಾಳ್ ಬಗ್ಗೆ ಅಭಿಪ್ರಾಯ ಪಡೆಯಲೆಂದೇ ಅಶೋಕ್ ಗೆ ವರಿಷ್ಠರು ಬುಲಾವ್ ಕೊಟ್ಟಿರುವ ಮಾಹಿತಿ ಇದೆ. ಈ ಹಿನ್ನೆಲೆ ಅಶೋಕ್ ಇಂದು ದೆಹಲಿಗೆ ಪ್ರಯಾಣ ಬೆಳಸಿದ್ದಾರೆ.
ಪಕ್ಷದ ರಾಜ್ಯ ಸಮಿತಿಯಲ್ಲಿನ ಅಂತಃಕಲಹ ಬಗೆಹರಿಸುವ ನಿಟ್ಟಿನಲ್ಲಿ ಹಿರಿಯ ನಾಯಕರ ತಂಡ ತನ್ನ ಪ್ರಯತ್ನವನ್ನು ಚುರುಕುಗೊಳಿಸಿದೆ. ಯತ್ನಾಳ್ ವಿರುದ್ಧ ಶಿಸ್ತುಕ್ರಮ ಕೈಗೊಂಡರೆ ಅಥವಾ ಬಿಟ್ಟರೂ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮಬೀರಿ, ಆಡಳಿತ ಕಾಂಗ್ರೆಸ್ ಪಕ್ಷಕ್ಕೆ ವರದಾನವಾಗಲಿದೆ ಎನ್ನುವುದು ಹಿರಿಯರ ಆತಂಕಕ್ಕೆ ಕಾರಣವಾಗಿದೆ. ಸಚಿವ ಪ್ರಲ್ಹಾದ ಜೋಶಿ ನಿವಾಸದಲ್ಲಿ ಸೋಮವಾರ ರಾತ್ರಿ ಭೋಜನ ಕೂಟ ನೆಪದಲ್ಲಿ ಹಿರಿಯರು ಸೇರಿ ಔಪಚಾರಿಕ ಮಾತುಕತೆ ನಡೆಸಿದ್ದಾರೆ.
ಯತ್ನಾಳ್ ಮತ್ತವರ ತಂಡವು ಭಾಗವಹಿಸಿತ್ತು ಎನ್ನಲಾಗಿದ್ದು, ಈ ಮಾತುಕತೆಯು ಶಿಸ್ತು ಸಮಿತಿ ಮುಂದೆ ಯತ್ನಾಳ್ ಬುಧವಾರ ಹಾಜರಾಗಲು ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ. ಇದೀಗ ಅಶೋಕ್ ಅವರು ಯತ್ನಾಳ್ ಪರ ನಿಲ್ತಾರಾ..? ಅಥವಾ ವಿಜಯೇಂದ್ರ ಪರ ನಿಲ್ತಾರಾ..? ಎನ್ನುವುದು ಕುತೂಹಲ ಮೂಡಿಸಿದೆ. ಪ್ರತಿಪಕ್ಷ ನಾಯಕರಾದ ಬಳಿಕ ಅಶೋಕ್ ಅವರು ಯತ್ನಾಳ್ ಜೊತೆ ಹೊಂದಾಣಿಕೆಯಿಂದ ಹೋಗುತ್ತಿದ್ದಾರೆ. ಅದು ಅಲ್ಲದೆ ಆರ್ ಅಶೋಕ್ ಅವರು ಪ್ರತಿಪಕ್ಷ ನಾಯಕರಾದರು ಮುಖ್ಯ ಕಾರಣ ವಿಜಯೇಂದ್ರ ಅವರು. ಒಕ್ಕಲಿಗ ನಾಯಕನನ್ನು ಪ್ರತಿಪಕ್ಷ ನಾಯಕನನ್ನಾಗಿ ಮಾಡಿ ದೊಡ್ಡ ಸಮುದಾಯದ ಓಲೈಕೆಗೆ ಮುಂದಾಗಿದ್ದರು. ಹೀಗಾಗಿ ಇಬ್ಬರೂ ದೋಸ್ತಿಗಳ ನಡುವೆ ಇಕ್ಕಟ್ಟಿಗೆ ಸಿಲುಕಿರುವ ಆರ್ ಅಶೋಕ್ ಅವರು ಯಾರ ಪರ ನಿಲ್ಲುತ್ತಾರೆ ಎಂಬುದೇ ತೀವ್ರ ಕುತೂಹಲವಾಗಿದೆ.