ಬೆಂಗಳೂರು:
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ಬಿಜೆಪಿ ಸರ್ಕಾರ ನೀಡಿದ್ದ ಅನುಮತಿಯನ್ನು ಸಿದ್ದು ಸರ್ಕಾರ ವಾಪಸ್ ಪಡೆದಿರುವುದನ್ನು ಪ್ರಶ್ನಿಸಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಒಪ್ಪಿಗೆ ಹಿಂಪಡೆದ ಸರ್ಕಾರದ ಆದೇಶ ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಯಾತ್ನಾಳ್ ಅವರನ್ನು ನಿಮ್ಹಾನ್ ಗೆ ಸೇರಿಸಬೇಕು ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಯತ್ನಾಳ್ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ನನ್ನನ್ನು ನಿಮ್ಹಾನ್ಸ್ ಗೆ ಸೇರಿಸಬೇಕು ಎಂದಿರುವ “ಭ್ರಷ್ಟಾಚಾರ ಆರೋಪಿ” ಮೊದಲು “ನಾರಾಯಣ ಹೃದಯಾಲಯದಲ್ಲಿ” ಬೆಡ್ ಬುಕ್ ಮಾಡಿಕೊಳ್ಳಲಿ. ಮತ್ತೆ ಜಾಮೀನು ಪಡೆಯೋಕ್ಕೆ ಇನ್ನೊಂದು ನಾಟಕ ಮಾಡಬೇಕಾಗುತ್ತೆ. ಜಾಮೀನು ಪಡೆಯೋಕ್ಕೆ ನ್ಯಾಯಾಲಯದ ಮುಂದೆ ಬಿಪಿ, ಶುಗರ್ ಅಂತ ಕಥೆ ಹೇಳಿ ಓಡಿ ಹೋಗುವವನ್ನಲ್ಲ ಈ ಬಸನಗೌಡ ಪಾಟೀಲ್ ನ್ಯಾಯಕ್ಕಾಗಿ ಏನು ಬೇಕಾದರೂ ಎದುರಿಸುವ ನಾಯಕ ಎಂದು ಗುಡುಗಿದ್ದಾರೆ.