ಹತ್ರಾಸ್‌ ಪ್ರಕರಣ : ನ್ಯಾಯಾಂಗ ತನಿಖೆಗೆ ಯೋಗಿ ಆದೇಶ …!

ಹತ್ರಾಸ್:

   122 ಜನರನ್ನು ಬಲಿ ಪಡೆದ ಹತ್ರಾಸ್ ಕಾಲ್ತುಳಿತ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಧವಾರ ಘೋಷಿಸಿದ್ದಾರೆ.

   ಇಂದು ಬೆಳಗ್ಗೆ ದುರಂತ ನಡೆದ ಹತ್ರಾಸದ ಫುಲ್ರೈ ಗ್ರಾಮಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಮೃತಪಟ್ಟವರಲ್ಲಿ ಆರು ಮಂದಿ ಇತರ ರಾಜ್ಯಗಳಿಂದ ಬಂದವರಿದ್ದಾರೆ. ಹರಿಯಾಣದ ನಾಲ್ವರು ಮತ್ತು ಮಧ್ಯಪ್ರದೇಶ ಹಾಗೂ ರಾಜಸ್ಥಾನದ ತಲಾ ಒಬ್ಬರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ ಎಂದರು.

    ಕಾಲ್ತುಳಿತ ಪ್ರಕರಣದ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲಾಗುವುದು. ನಿವೃತ್ತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಸಹ ಈ ನ್ಯಾಯಾಂಗ ತನಿಖೆಯ ಭಾಗವಾಗಲಿದ್ದಾರೆ ಎಂದು ಉತ್ತರ ಪ್ರದೇಶ ಸಿಎಂ ಹೇಳಿದರು.

    ದುರಂತಕ್ಕೆ ಯಾರು ಹೊಣೆ, ಅಥವಾ ಇದು ಪಿತೂರಿಯೇ ಎಂದು ತನಿಖಾ ಸಮಿತಿ ಪತ್ತೆ ಮಾಡುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳ ತಡೆಗೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಅನ್ನು ಸರ್ಕಾರ ಜಾರಿಗೆ ತರಲಿದೆ ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

    ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತದಿಂದ 122 ಜನ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಧಾರ್ಮಿಕ ಸಭೆಯ ಸಂಘಟಕರ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಸ್ವಯಂ ಘೋಷಿತ ದೇವ ಮಾನವ ಭೋಲೆ ಬಾಬಾ ಹೆಸರನ್ನು ಎಫ್ಐಆರ್ ನಿಂದ ಕೈಬಿಡಲಾಗಿದೆ.

    ಹತ್ರಾಸ್ ಪಟ್ಟಣದಿಂದ 47 ಕಿಮೀ ದೂರದಲ್ಲಿರುವ ಫುಲ್ರೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ ನೂರಾರು ಭಕ್ತರು ಗಾಯಗೊಂಡಿದ್ದು, ಗಾಯಾಳುಗಳಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link