ಧಾರವಾಡ:
ವಿಶ್ವದ ಅತ್ಯಂತ ದುಬಾರಿಯಾದ ಮಿಯಾಜಾಕಿ ಮಾವಿನ ಹಣ್ಣು ಧಾರವಾಡದ ಮಾವುಮೇಳದಲ್ಲಿ ಗಮನ ಸೆಳೆಯುತ್ತಿದ್ದು, ಒಂದು ಹಣ್ಣನ್ನು 10 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿದೆ.
ತೋಟಗಾರಿಕೆ ಇಲಾಖೆ ಆವರಣದಲ್ಲಿ ಮಂಗಳವಾರದಿಂದ ಆರಂಭಗೊಂಡಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಈ ಮಾವು ನೆರೆದಿದ್ದವರ ಗಮನ ಸೆಳೆದಿದೆ.
ಕಲಕೇರಿ ಮಾವು ಬೆಳೆಗಾರ ಪ್ರಮೋದ ಗಾಂವಕರ ತೋಟದಲ್ಲಿ ಬೆಳೆದ ಮಾವು ಇದಾಗಿದ್ದು, ಮಾವು ಮೇಳದಲ್ಲಿ ಈ ತಳಿಯ ಮಾವನ್ನು ಇದೇ ಮೊದಲ ಬಾರಿಗೆ ಪ್ರದರ್ಶನಕ್ಕೆ ಇಡಲಾಗಿದೆ. ಜನರು ಇಷ್ಟೊಂದು ದುಬಾರಿ ಮಾವಿನ ಹಣ್ಣನ್ನು ಖರೀದಿಸದೇ ಹೋದರೂ ಕಣ್ಣುಂಬ್ತಿಕೊಳ್ಳಬಹುದಾಗಿದೆ.
ಮಾವಿನ ತಳಿಗಳಲ್ಲಿಯೇ ಅತೀ ದುಬಾರಿ ಈ ಮಿಯಾಜಾಕಿ ಮಾವಿನ ಹಣ್ಣು. ಜಪಾನ್ ಈ ತಳಿಯನ್ನು ಬೆಳೆಯುತ್ತಿದೆ. ಈ ಮಾವಿನ ಹಣ್ಣಿನ ಪ್ರತಿ ಕೆಜಿಗೆ ಸುಮಾರು 2.7ಲಕ್ಷ ರೂ.ಗಳು ಆಗಿದ್ದು, ಮೇಳದಲ್ಲಿ ಒಂದು ಹಣ್ಣನ್ನು 10 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿದೆ.
ಜಪಾನ ತಾಳಿಯಾದ ಮಿಯಜಾಕಿಯನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ತಂದಿರುವುದಾಗಿ ರೈತ ಪ್ರಮೋದ ಗಾಂವ್ಕರ್ ಅವರು ಹೇಳಿದ್ದಾರೆ.ಸುಮಾರು 7 ಸಾವಿರಕ್ಕೂ ಹೆಚ್ಚು ಮಾವಿನ ಗಿಡಗಳನ್ನು ಬೆಳೆಸುತ್ತಿದ್ದು ಅದರಲ್ಲಿ ಈ ಮಿಯಾಜಾಕಿ ಸೇರಿದಂತೆ ವಿವಿಧ ಮಾವಿನ ತಳಿಗಳನ್ನು ಬೆಳೆಯುತಿದ್ದೇನೆ ಎಂದು ತಿಳಿಸಿದ್ದಾರೆ.
ಮರವು ಸ್ಥಳೀಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಮರವು ಪ್ರತಿ ಋತುವಿಗೆ ಗರಿಷ್ಠ 14 ಹಣ್ಣುಗಳನ್ನು ನೀಡುತ್ತದೆ. ಇತ್ತೀಚೆಗೆ ಸುಮಾರು 2.5 ಲಕ್ಷ ರೂ.ಗೆ ಹತ್ತಾರು ಮಾವಿನ ಹಣ್ಣು ಮಾರಾಟವಾಗಿತ್ತು. ಅಪರೂಪದ ಹಣ್ಣಾಗಿರುವುದರಿಂದ ಆರೋಗ್ಯಕ್ಕೆ ಲಾಭದಾಯಕವಾಗಿರುವ ಕಾರಣ ಬೆಲೆ ಹೆಚ್ಚಾಗಿದೆ ಎಂದರು,
ಈ ಮಾವಿನ ಹಣ್ಣನ್ನು ಕೊಪ್ಪಳದ ಗ್ರಾಹಕರೊಬ್ಬರಿಗೆ ಪ್ರತಿ ಹಣ್ಣಿಗೆ 10 ಸಾವಿರ ರೂ.ರಂತೆ ಮಾರಾಟ ಮಾಡಿದ್ದೇನೆ. ರಾಜ್ಯದಲ್ಲಿ ಕೆಲವೇ ಖರೀದಿದಾರರು ಲಭ್ಯವಿದ್ದಾರೆ. ಹಣ್ಣಿನಲ್ಲಿ ಪೌಷ್ಟಿಕಾಂಶ ಸಮೃದ್ಧವಾಗಿದೆ ಮತ್ತು ವಿಟಮಿನ್ ಎ, ಬಿ ಮತ್ತು ಸಿ ಇದೆ. ಹಣ್ಣು ಚರ್ಮಕ್ಕೂ ಒಳ್ಳೆಯದು. ಸುರಕ್ಷತೆಯ ಬಗ್ಗೆ ಚಿಂತಿಸಿ ಈ ಮಾವಿನ ಹಣ್ಣುಗಳ ಬೆಲೆ ಮತ್ತು ಲಭ್ಯತೆಯನ್ನು ಬಹಿರಂಗಪಡಿಸಿಲ್ಲ. ಇತರ ಬೆಳೆಗಾರರಿಗೆ ಶಿಕ್ಷಣ ನೀಡಲು ಮೇಳದಲ್ಲಿ ಒಂದು ಹಣ್ಣನ್ನು ಪ್ರದರ್ಶಿನಕ್ಕಿಡಲಾಗಿದೆ ಎಂದು ಹೇಳಿದರು.