ತುಮಕೂರು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿ ದಿನದಿಂದ ದಿನಕ್ಕೆ ಇಂಟ್ರಸ್ಟಿಂಗ್ ಟ್ವಿಸ್ಟ್ ಪಡೆಯುತ್ತಿದ್ದು, ಕಥೆ ರೋಚಕ ತಿರುವಿನತ್ತ ಸಾಗುತ್ತಿದ್ದೆ. ಪ್ರೇಕ್ಷಕರು ಕೂಡ ಧಾರಾವಾಹಿಯನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಈ ಮಧ್ಯ ಧಾರಾವಾಹಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ವೀಕ್ಷಕರಿಗೆ ಬೇಸರ ತಂದಿದೆ.
ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಾಯಕಿ ಸುಮನಾ ಆಗಿ ಅಭಿನಯಿಸುತ್ತಿದ್ದ ಕಾವ್ಯ ಶೈವ ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ಈವರೆಗೂ ಸುಮನಾ ಆಗಿ ಕಿರುತೆರೆ ಪ್ರೇಕ್ಷಕರ ಮನಸು ಗೆದ್ದಿದ್ದ ಕಾವ್ಯ ಶೈವ ದಿಢೀರ್ ಧಾರಾವಾಹಿಯಿಂದ ಹೊರ ಬಂದಿದ್ದಾರೆ. ಸದ್ಯ ಸುಮನಾ ಪಾತ್ರಕ್ಕೆ ಹೊಸ ನಟಿ ಬಂದಿದ್ದು, ಪ್ರೇಕ್ಷಕರು ಹಳೆಯ ಸುಮನಾ ಪಾತ್ರವನ್ನು ಮೆಚ್ಚಿಕೊಂಡಿದ್ದರು.
ಧಾರಾವಾಹಿ ಉತ್ತಮವಾಗಿ ವೀಕ್ಷಣೆ ಕಾಣುತ್ತಿರುವಾಗಲೇ ಸುಮನಾ ಪಾತ್ರಧಾರಿಯನ್ನು ಏಕೆ ಬದಲಾಯಿಸಲಾಯಿತು. ಅಥವಾ ಕಾವ್ಯ ಶೈವ ಧಾರಾವಾಹಿಯಿಂದ ಯಾಕೆ ಹೊರಬಂದರು ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಿದೆ. ಹೀಗಾಗಿ ಸ್ವತಃ ನಟಿ ಕಾವ್ಯ ಶೈವ ಧಾರಾವಾಹಿಯಿಂದ ಹೊರ ಬಂದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ನಟಿ ಕಾವ್ಯ, ‘ತುಂಬಾ ಜನ ಮೆಸೇಜ್ ಮಾಡಿದ್ದೀರಾ, ಎಲ್ಲರದೂ ಒಂದೇ ಪ್ರಶ್ನೆ. ನಾನು ಯಾಕೆ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎನ್ನುವುದು. ನಾನಾ ಕಾರಣದಿಂದ ನಾನು ಆ ಪ್ರಾಜೆಕ್ಟ್‌ನ ಕಂಪ್ಲೀಟ್ ಮಾಡೋಕೆ ಆಗಲಿಲ್ಲ. ಕ್ಷಮೆ ಇರಲಿ ಅದಕ್ಕೆ. ನಾನು ನನ್ನ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದೇನೆ. ಆದ್ರೂ ಆಗಲಿಲ್ಲ’
‘ಈಗ ಎಷ್ಟು ಪ್ರೀತಿ ಕೊಡುತ್ತಿದ್ದೀರೋ ಮುಂದೆನೂ ಅದಕ್ಕಿಂತ ಜಾಸ್ತಿ ಪ್ರೀತಿ ಕೊಟ್ಟು ಸಪೋರ್ಟ್ ಮಾಡಿ. ಹಾಗೆ ನನಗೆಷ್ಟು ಪ್ರೀತಿ ಕೊಟ್ಟಿದ್ದೀರೋ ಹೊಸ ಸುಮನಾ ಪಾತ್ರಕ್ಕೂ ಅಷ್ಟೇ ಪ್ರೀತಿ ಹಂಚಿ ಅಂತಾ ಕೇಳಿಕೊಳ್ಳುತ್ತೇನೆ’ ಎಂದು ನಟಿ ಕಾವ್ಯ ಶೈವ ವಿಡಿಯೋ ಮೂಲಕ ಕೆಂಡಸಂಪಿಗೆ ವೀಕ್ಷಕರಿಗೆ ಮನವಿ ಮಾಡಿಕೊಂಡಿದ್ದಾರೆ. ನಟಿ ಕಾವ್ಯ ಈ ವಿಡಿಯೋ ನೋಡಿದ ಅಭಿಮಾನಿಗಳು ಈ ಪಾತ್ರದಲ್ಲಿ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.
ಇದೀಗ ಕಾವ್ಯಾ ಶೈವ ಅವರು ನಿರ್ವಹಿಸುತ್ತಿದ್ದ ಸುಮನ ಪಾತ್ರಕ್ಕೆ ಬೇರೊಬ್ಬರು ಆಯ್ಕೆಯಾಗಿದ್ದಾರೆ. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೇನುಗೂಡು ಎಂಬ ಧಾರಾವಾಹಿಯಲ್ಲಿ ಪ್ರಾಚಿ ಎಂಬ ಪಾತ್ರವನ್ನು ನಿರ್ವಹಿಸಿದ್ದರು ಮಧುಮಿತಾ ಇನ್ನು ಮುಂದೆ ಸುಮನಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ