ಮಡಿಕೇರಿ:
ಯುವಕನೊಬ್ಬ ತನ್ನ ಮನೆಯ ಬೆಡ್ ರೂಂನಲ್ಲಿ ಯಾರಿಗೂ ತಿಳಿಯದಂತೆ 15 ಅಡಿ ಗುಂಡಿ ತೋಡಿದ್ದ.. ಕೋಳಿ ಬಲಿಪೂಜೆಯನ್ನೂ ನೆರವೇರಿಸಿದ್ದವ ದೊಡ್ಡ ಬಲಿ ಕೊಡಲು ನಿರ್ಧರಿಸಿದ್ದ. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು ಯುವಕನ ಜತೆಗೆ ಮತ್ತೊಬ್ಬ ವ್ಯಕ್ತಿಯನ್ನೂ ಬಂಧಿಸಿದ್ದು, ಮುಂದೆ ನಡೆಯಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಇಂತಹ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಒಳಮಾಳ ಕೋಟೆ ಪೈಸಾರಿಯಲ್ಲಿ ನಡೆದಿದೆ. ಒಳಮಾಳ ಕೋಟೆ ಪೈಸಾರಿ ನಿವಾಸಿ ರಮೇಶ್ ಎಂಬುವರ ಪುತ್ರ ಎಂ.ಆರ್.ಗಣೇಶ್(23) ಹಾಗೂ ಉಡುಪಿ ಜಿಲ್ಲೆ ಪಡುಬಿದ್ರಿ ಹಂಚಿನಡ್ಕದ ಅಬ್ದುಲ್ ರೆಹಮಾನ್ ಎಂಬುವರ ಪುತ್ರ ಬಿ.ಕೆ.ಸಾಧಿಕ್(42) ಬಂಧಿತ ಆರೋಪಿಗಳು.
ಎಂ.ಆರ್.ಗಣೇಶ್ ಅವರ ಮನೆಯಲ್ಲಿ ನಿಧಿ ಇರುವುದಾಗಿ ಮಂಗಳೂರು ಹಾಗೂ ಕೇರಳ ಮೂಲದ ವಾಮಾಚಾರಿಗಳು ನಂಬಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳು ಮನೆಯ ಬೆಡ್ರೂಂನಲ್ಲಿ 15 ಅಡಿಗಳಷ್ಟು ಆಳದ ಸುರಂಗ ತೋಡಿದ್ದರು.
ನಿಧಿ ಶೋಧನೆ ಸಂಬಂಧ ಮನೆಯಲ್ಲಿ ಕೋಳಿಯ ಬಲಿಪೂಜೆ ನಡೆಸಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬಲಿಪೂಜೆಗೆ ನಿರ್ಧರಿಸಲಾಗಿತ್ತು. ಅಷ್ಟರಲ್ಲಿ ದಾಳಿ ಮಾಡಿದ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಂದೆ ನಡೆಯಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ. ಇನ್ನೂ ಕೆಲ ಅಡಿಗಳಷ್ಟು ಮಣ್ಣು ತೆಗೆದಿದ್ದಲ್ಲಿ ಮನೆ ಕುಸಿದು ಮತ್ತೊಂದು ಅವಡ ಸಂಭವಿಸುವ ಸಾಧ್ಯತೆಯಿತ್ತು ಎನ್ನಲಾಗಿದೆ.
ಆರೋಪಿಗಳ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಮಾಚಾರಕ್ಕೆ ಬಳಸಿದ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಉಳಿದ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಮಡಿಕೇರಿ ಡಿವೈಎಸ್ಪಿ ಗಜೇಂದ್ರಪ್ರಸಾದ್ ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಗುಪ್ತದಳ ಇನ್ಸ್ಪೆಕ್ಟರ್ ಐ.ಪಿ.ಮೇದಪ್ಪ, ಮಡಿಕೇರಿ ನಗರ ವೃತ್ತ ನಿರೀಕ ಪಿ.ವಿ.ವೆಂಕಟೇಶ್, ಡಿಸಿಐಬಿ ಸಿಬ್ಬಂದಿ ವೆಂಕಟೇಶ್, ಯೋಗೇಶ್ಕುಮಾರ್, ನಿರಂಜನ್,
ವಸಂತ, ಸುರೇಶ್, ಶರತ್ ರೈ, ಶಶಿಕುಮಾರ್, ಅಭಿಲಾಷ್, ಸಿದ್ದಾಪುರ ಠಾಣೆ ಎಎಸ್ಐ ಮೊಹಿದ್ದೀನ್, ಸಿಬ್ಬಂದಿ ಬೆಳಿಯಪ್ಪ, ಲಕ್ಷ್ಮೀಕಾಂತ್, ಮಲ್ಲಪ್ಪ, ಶಿವಕುಮಾರ್, ಸಿಡಿಆರ್ ಸೆಲ್ನ ರಾಜೇಶ್, ಗಿರೀಶ್, ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
