ಕಾಂಗ್ರೆಸ್ ಪಕ್ಷದಲ್ಲಿ ಯುವಕರಿಗೆ ಹೆಚ್ಚು ಆದ್ಯತೆ ನೀಡುವ ಅಗತ್ಯವಿದೆ

ಶಿರಾ:

                ಶಿರಾದಲ್ಲಿ ಮಾಜಿ ಸಂಸದ ಮುದ್ದಹನುಮೇಗೌಡ ಹೇಳಿಕೆ

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಸಂಘಟಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಯುವಕರನ್ನು ಹೆಚ್ಚು ಹೆಚ್ಚು ಪ್ರೋತ್ಸಾಹಿಸುವ ಕೆಲಸವನ್ನು ಪಕ್ಷದ ನಾಯಕರಾದ ನಾವುಗಳು ಮಾಡಬೇಕಿದೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ಶಿರಾ ನಗರದ ಮಿನಿ ವಿಧಾನಸೌಧ ಸಮೀಪದ ಬೈಪಾಸ್ ರಸ್ತೆಯಲ್ಲಿ ಸೋಮವಾರ ನಡೆದ ತಮ್ಮ ಜನ ಸಂಪರ್ಕ ಕಛೇರಿಯ ಭೂಮಿ ಪೂಜೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಾಸಲು ಸತೀಶ್ ಸಾಮಾಜಿಕ ಬದುಕನ್ನು ನಿರಂತರವಾಗಿ ಕಟ್ಟಿಕೊಂಡು ನಡೆಯುತ್ತಿದ್ದು, ಅವರಿಂದ ಈ ಕ್ಷೇತ್ರದ ಜನತೆಯ ನೊಂದವರ ಬದುಕು ಹಸನಾಗುವಂತಾಗಲಿ. ಸಮಯೋಚಿತ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಅವರ ಶ್ರಮಕ್ಕೆ ಪ್ರತಿಫಲ ನೀಡುವ ಕಾಲ ಬರುತ್ತದೆ ಎಂದು ಮುದ್ದಹನುಮೇಗೌಡ ತಿಳಿಸಿದರು.

ಮಾಜಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಜನಸಂಪರ್ಕ ಸಭೆಯನ್ನು ಆರಂಭಿಸುವ ಮೂಲಕ ಸತೀಶ್ ಸಾಸಲು ಸಂತ್ರಸ್ತರ ಸಹಾಯಕ್ಕೆ ಮುಂದಾಗಿದ್ದು, ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಅವರ ಶ್ರಮ ಸಾರ್ಥಕವಾಗಲಿ ಎಂದು ಹಾರೈಸಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ.ಸತೀಶ್ ಸಾಸಲು ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷನಾಗಿ ಶಿರಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಲು ಹಾಗೂ ಕ್ಷೇತ್ರದ ಜನ ಸಂಪರ್ಕದಲ್ಲಿ ಹೆಚ್ಚು ತೊಡಗಲು ಈ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ತಿಳಿಸಿದರು.

ಜನಸಂಪರ್ಕ ಕಛೇರಿಯ ಭೂಮಿ ಪೂಜೆಯಲ್ಲಿ ಕ್ಷೇತ್ರದ ಬಹುತೇಕ ತಳ ಸಮುದಾಯಗಳ ಹಾಗೂ ಎಲ್ಲಾ ವರ್ಗದ ಜನತೆ ಹಾಗೂ ಮುಖಂಡರು ಪಾಲ್ಗೊಂಡಿರುವುದು ನನಗೆ ಸಂತಸದ ವಿಚಾರವಾಗಿದೆ. ಕೆಲ ಬಾಹ್ಯಶಕ್ತಿಗಳು ಈ ಕಾರ್ಯಕ್ರಮ ನಡೆಯದಂತೆ ವಿಘ್ನ ಗೊಳಿಸುವ ಪ್ರಯತ್ನ ಮಾಡಿದ್ದರಾದರೂ, ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಹೆಚ್ಚು ಮಂದಿ ಆಗಮಿಸಿದ್ದೀರಿ ನಿಮಗೆ ನಾನು ಚಿರಋಣಿ ಎಂದರು.

ಈ ಕ್ಷೇತ್ರದ ನಾಡಿ ಮಿಡಿತ ನನಗೆ ಅರಿವಾಗಿದೆ. ಇಲ್ಲಿ ಸಾಮಾಜಿಕ ನ್ಯಾಯಪರ ಮನಸ್ಸುಗಳಿವೆ. ಈ ಹಿನ್ನೆಲೆಯಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸುವ ಇಚ್ಛಾಶಕ್ತಿ ನನಗಿದೆ. ನಾನೂ ಕೂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ನಾನು ಬೇರೆ ಪಕ್ಷದ ಸಂಘಟನೆ ಮಾಡುತ್ತಿಲ್ಲ. ಆದರೂ ಕೆಲವರು ನನ್ನ ಸಂಘಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದು ನಿಜಕ್ಕೂ ವಿಪರ್ಯಾಸ ಎಂದರು.

ಟಿ.ಬಿ.ಜಯಚಂದ್ರ ನಮ್ಮ ನಾಯಕರು. ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೈಗೊಂಡಿದ್ದಾರೆ. ಈ ಹಿಂದೆ ಅವರು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಅವರ ಪರ ವ್ಯಾಪಕ ಪ್ರಚಾರದಲ್ಲಿ ತೊಡಗಿದ್ದೆನು. ಇದೀಗ ನಾನು ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಆಕಾಂಕ್ಷಿ ಎಂಬ ಒಂದೆ ಕಾರಣಕ್ಕೆ ಷಡ್ಯಂತರ ಮಾಡುವುದು ಸರಿಯಲ್ಲ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ರಘುನಾಥ್, ನಗರಸಭಾ ಸದಸ್ಯರಾದ ಎಸ್.ಎಲ್.ರಂಗನಾಥ್, ರವಿಕುಮಾರ್, ಜಾಂಕು, ನಸ್ರುಲ್ಲಾಖಾನ್ ಸೇರಿದಂತೆ ವಿವಿಧ ಸಮುದಾಯಗಳ ಪ್ರಮುಖರು, ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು, ಮುಖಂಡರು ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link