ಹೈದರಾಬಾದ್:
ರೀಲ್ಸ್ ಹುಚ್ಚಾಟಕ್ಕಾಗಿ ತುಂಬಿದ ಮಾರುಕಟ್ಟೆ ರಸ್ತೆಯಲ್ಲಿ ಹಣ ಎಸೆದು ವಿಡಿಯೋ ಮಾಡಿದ್ದ ಯೂಟ್ಯಬರ್ ಹರ್ಷನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.ಹೈದರಾಬಾದ್ ನ ಕುಕಟ್‌ಪಲ್ಲಿಯ ಫುಟ್‌ಪಾತ್‌ನಲ್ಲಿ ಕರೆನ್ಸಿ ನೋಟುಗಳನ್ನು ಗಾಳಿಯಲ್ಲಿ ಎಸೆದು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇರೆಗೆ ಯೂಟ್ಯೂಬರ್ ಹರ್ಷನನ್ನು ಕುಕಟ್‌ಪಲ್ಲಿ ಪೊಲೀಸರು ಬಂಧಿಸಿದ್ದಾರೆ.
ಹರ್ಷ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು Views ಪಡೆಯಲು ಹಣ ಎಸೆದು ವಿಡಿಯೋ ಮಾಡಿದ್ದ. ಆ ವಿಡಿಯೋಗಳನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದ. ಇದು ವ್ಯಾಪಕ ವೈರಲ್ ಆಗಿತ್ತು. ಹರ್ಷ ಅಲಿಯಾಸ್ ವಂಶಿ ಪವರ್ ಎಂಬ ಈ ಯೂಟ್ಯೂಬರ್ ಹೈದರಾಬಾದ್ ನ ಮೋತಿನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದು, ತನ್ನ ಯೂಟ್ಯೂಬ್ ನಲ್ಲಿ ತರಹೇವಾರಿ ವಿಚಾರಗಳ ಬಗ್ಗೆ ಮಾತನಾಡುತ್ತಾ ಖ್ಯಾತಿ ಗಳಿಸಿದ್ದ. ಆದರೆ ಇತ್ತೀಚೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಹಣವನ್ನು ಎಸೆದು ಹಲವೆಡೆ ವಿಡಿಯೋ ಮಾಡಿಕೊಂಡಿದ್ದ.
ಬಳಿಕ ತನ್ನ ಸಹಾಯಕರನ್ನು ಕಳುಹಿಸಿ ಆ ಹಣವನ್ನು ವಾಪಸ್ ಪಡೆಯಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಜೂನ್ ತಿಂಗಳಲ್ಲಿ ಇದೇ ಕುಕಟ್ ಪಲ್ಲಿಯ ಮೆಟ್ರೋ ರೈಲು ನಿಲ್ದಾಣದ ಬಳಿಯೂ ಹಣ ಎಸೆದು ವಿಡಿಯೋ ಮಾಡಿಕೊಂಡಿದ್ದ. ಈ ವೇಳೆ ನೂರಾರು ಜನ ಆ ಹಣ ಆರಿಸಿಕೊಳ್ಳಲು ಮುಂದಾಗಿ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿತ್ತು.ಇದೀಗ ಪೊಲೀಸರು ಹರ್ಷ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.