ಉಡುಪಿ:
ಮತದಾನ ಮಾಡಿದ ಕೆಲವೇ ಕ್ಷಣದಲ್ಲಿ ವೃದ್ಧೆಯೊಬ್ಬರು ಕೊನೆಯುಸಿರೆಳೆದಿರುವ ಘಟನೆ ಬ್ರಹ್ಮಾವರ ತಾಲೂಕಿನ ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ನಡೆದಿದೆ.
ಚಡಗರ ಅಗ್ರಹಾರದ ನಿವಾಸಿ ಪಿ.ಯಶೋಧಾ ನಾರಾಯಣ ಉಪಾಧ್ಯ (83) ಮೃತಪಟ್ಟವರು. ಸಾವಿನ ಮುನ್ನ ಹಕ್ಕು ಚಲಾಯಿಸಿದ ನಿರ್ವಹಿಸಿದ ಹಿರಿಯ ನಾಗರಿಕರ ಈ ಕರ್ತವ್ಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.
ಯಶೋಧಾ ಅವರು ಬ್ರಹ್ಮಾವರ ತಾಲೂಕು ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ನಿವಾಸಿಯಾಗಿದ್ದು, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ದಿ.ನಾರಾಯಣ ಉಪಾಧ್ಯ ಅವರ ಪತ್ನಿಯಾಗಿದ್ದಾರೆ. ಹಿರಿಯ ನಾಗರಿಕರಿಗಾಗಿ ರೂಪಿಸಲಾಗಿರುವ ಮನೆಯಿಂದ ಮತ ಕಾರ್ಯಕ್ರಮದಡಿ ಮನೆಯಿಂದಲೇ ಮತದಾನ ಮಾಡಿದ್ದರು.
ಮತದಾನಕ್ಕೂ ಮುನ್ನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಮತದಾನ ಮಾಡಿಯೇ ಆಸ್ಪತ್ರೆಗೆ ತೆರಳಲು ಅವರು ನಿಶ್ಚಯಿಸಿದ್ದರು. ಮತದಾನ ಮಾಡಿದ ಬಳಿಕವೇ ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ತೆರಳಿ ಅಲ್ಲಿ ದಾಖಲಾಗಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಯಶೋದಮ್ಮ ಮೃತಪಟ್ಟಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಲೋಕಸಭೆ ಚುನಾವಣೆಯ ಅಂಚೆ ಮತದಾನ ಕಾರ್ಯಕ್ರಮ ಏಪ್ರಿಲ್ 13ರಿಂದ ಆರಂಭವಾಗಿದ್ದು, ಏಪ್ರಿಲ್ 18ರವರೆಗೆ ನಡೆಯುತ್ತಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಹಾಗೂ ವಿಶೇಷ ಚೇತನರಿಗೆ ಮನೆಯಿಂದಲೇ ಅಂಚೆ ಮತದಾನ ಮಾಡುವ ಸೌಲಭ್ಯ ನೀಡಲಾಗಿದೆ.