ವಿ. ಸೋಮಣ್ಣ ಸೋಲಿಸಲು ಬಿಜೆಪಿಯಿಂದ ಹೋಗಿದೆ ಕೋಟಿ ಕೋಟಿ ಹಣ : ಯತ್ನಾಳ್‌

ವಿಜಯಪುರ

    ಲೋಕಸಭೆ ಚುನಾವಣೆಯಲ್ಲಿ ಪರಾಜಿತರಾದ ಅಭ್ಯರ್ಥಿಗಳು ಮಾತ್ರವಲ್ಲ ಗೆದ್ದ ಅಭ್ಯರ್ಥಿಗಳೂ ಕೂಡ ದೂರು ನೀಡಿದ್ದಾರೆ. ತುಮಕೂರು ಲೋಕಸಭೆ ಕ್ಷೇತ್ರದಿಂದ ಗೆಲುವು ಸಾಧಿಸಿದ ವಿ. ಸೋಮಣ್ಣ ಅವರು ಕೂಡ ತಮ್ಮನ್ನು ಸೋಲಿಸಲು ಬಿಜೆಪಿ ಮೂಲದಿಂದಲೇ ಅಪಾರ ಪ್ರಮಾಣದ ಹಣ ಹೋಗಿದೆ ಎಂದು ಬಸನಗೌಡ ಪಾಟೀಲ ಯತ್ನಾಳ್ ಆರೋಪಿಸಿದ್ದಾರೆ‌.

    ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಕುರಿತು ಏನು ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಪಕ್ಷ ವಿರೋಧ ಚಟುವಟಿಕೆ ಕುರಿತು ಹರಿಹರ ವಿಧಾನಸಭೆ ಮತಕ್ಷೇತ್ರದ ಶಾಸಕರೇ ಹೇಳುತ್ತಾರೆ ಎಂದರೆ ಅದು ಗಂಭೀರ ಆರೋಪ. ಅವರು ಹಾಲಿ ಶಾಸಕರಾಗಿದ್ದು, ಅವರು ಮಾಡಿರುವ ಆರೋಪ ಸಾಮನ್ಯವಲ್ಲ ಎಂದು ಹೇಳಿದರು.

    ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. ದಾವಣಗೆರೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಕಾರಣ ಎಂದು ಹರಿಹರ ಶಾಸಕ ಹರೀಶ ಮಾಡಿರುವ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.

    ಯಾವ್ಯಾವ ಲೋಕಸಭೆ ಕ್ಷೇತ್ರಗಳಲ್ಲಿ ಸಮಸ್ಯೆಯಾಗಿದೆ? ಯಾರು ಪಕ್ಷದ ವಿರುದ್ಧ ಚುನಾವಣೆ ಮಾಡಿದ್ದಾರೆ? ಯಾರಿಗೆ ತೊಂದರೆಯಾಗಿದೆ? ಎಂಬುದರ ಕುರಿತು ಆಯಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮಾಹಿತಿ ನೀಡಿದ್ದಾರೆ. ಸಂಪನ್ಮೂಲದ ವ್ಯವಸ್ಥೆಮತ್ತು ಇತರ ಸಮಸ್ಯೆಗಳ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೊಡ್ಡ ದೊಡ್ಡ ಜವಾಬ್ದಾರಿ ಇದ್ದವರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ವಿಚಾರ ಹೈಕಮಾಂಡ್ ಗಮನಕ್ಕೆ ಬಂದಿದೆ ಎಂದು ಯತ್ನಾಳ್‌ ಹೇಳಿದರು.

   ಕಲಬುರಗಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಉಮೇಶ ಜಾಧವ, ಬೀದರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭಗವಂತ ಖೂಬಾ ಕೂಡ ಇದೇ ರೀತಿ ಆರೋಪ ಮಾಡಿದ್ದಾರೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರದೂ ಹೀಗೆ ಆಗಿದೆ. ಈ ವಿಚಾರದಲ್ಲಿ ಯಾರ ಪರವಾಗಿಯೂ ಇರದ ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಯತ್ನಾಳ್‌ ಅವರು ಬಿಜೆಪಿ ಹೈಕಮಾಂಡ್‌ ಆಗ್ರಹಿಸಿದರು.

    ದೊಡ್ಡ ದೊಡ್ಡ ಜವಾಬ್ದಾರಿ ಇರುವವರು ಈ ರೀತಿ ಮಾಡುವುದರಿಂದ ಪಕ್ಷಕ್ಕೆ ಒಳಿತಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 350 ರಿಂದ 400 ಸ್ಥಾನಗಳು ಬರುತ್ತವೆ ಎಂದು ನಿರೀಕ್ಷೆ ಇಟ್ಟುಕೊಂಡಿದ್ದೇವು. ಆದರೆ, ಬಹಳ ಕಡೆ ಗದ್ದಲವಾಗಿದೆ. ಕೆಲವು ಕಡೆ ಲೋಕಸಭೆ ಸದಸ್ಯರು ಕೂಡ ಜನಪ್ರಿಯತೆ ಕಳೆದುಕೊಂಡಿದ್ದರು. ಜನರೊಂದಿಗೆ ಸಂಪರ್ಕ ಹೊಂದಿರಲಿಲ್ಲ. ಕೆಲಸ ಮಾಡಿರಲಿಲ್ಲ. ಕಾರ್ಯಕರ್ತರ ಜೊತೆ ಶಾಸಕರ ಜೊತೆ ಒಳ್ಳೆ ಸಂಬಂಧ ಇಟ್ಟುಕೊಂಡಿರಲಿಲ್ಲ. ಸ್ಪರ್ಧೆಗೆ ಬಹಳ ವಿರೋಧವಿತ್ತು. ಅಂಥವರು ಸ್ಪರ್ಧಿಸಬಾರದಿತ್ತು. ಸೋಲಿಗೆ ಇವು ಕೂಡ ಕಾರಣವಾಗಿದೆ ಎಂದು ಹೇಳಿದರು.

    ಈ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿರುವುದರಲ್ಲಿ ಮೋದಿ ಮತ್ತು ಪಕ್ಷದ ಯಾವದೇ ತಪ್ಪಿಲ್ಲ. ಅಭ್ಯರ್ಥಿಗಳ ಕುರಿತು ವಿರೋಧ ಇದ್ದಾಗ ಬಿಟ್ಟು ಕೊಡಬೇಕಿತ್ತು. ವಿಜಯಪುರ ಲೋಕಸಭೆ ಅಭ್ಯರ್ಥಿ ರಮೇಶ ಜಿಗಜಿಣಗಿ ಮತ್ತು ನಮ್ಮ ಮಧ್ಯ ಜಗಳವಿತ್ತು. ಆದರೂ ಚುನಾವಣೆಯಲ್ಲಿ ನಾವು ಒಂದಾಗಿ ಕೆಲಸ ಮಾಡಿದ್ದೇವೆ. ಪಕ್ಷ ಮತ್ತು ದೇಶದ ವಿಚಾರ ಬಂದಾಗ ಒಂದಾಗಬೇಕು. ಒಂದು ಲೋಕಸಭೆ ಸ್ಥಾನ ಕಳೆದುಕೊಂಡರೆ ಮೋದಿಯವರನ್ನೇ ಕಳೆದುಕೊಂಡಂತೆ ಆಗುತ್ತದೆ. ಮುಂದಿನ ದಿನಗಳಲ್ಲಿ ಸರಿ ಮಾಡಲಾಗುತ್ತದೆ ಎಂದು ಯತ್ನಾಳ್‌ ಹೇಳಿದರು.

    ಲೋಕಸಭೆ ಚುನಾವಣೆ ಬಳಿಕ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯಾಗಲಿದೆ ಎಂದು ತಾವು ಈ ಹಿಂದೆ ನೀಡಿದ್ದ ಹೇಳಿಕೆಯ ಹಿನ್ನೆಲೆಯಲ್ಲಿ ಈ ಎಲ್ಲ ಅಂಶಗಳ ಕಾರಣ ಈಗ ಬದಲಾವಣೆಯಾಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೌದು, ಈ ಎಲ್ಲ ವಿಚಾರಗಳಿಂದ ಪಕ್ಷದಲ್ಲಿ ಬದಲಾವಣೆ ಆಗಲಿದೆ. ನಿಶ್ಚಿತವಾಗಿಯೂ ಬದಲಾವಣೆಯಾಗಿ ಎಲ್ಲವೂ ಸ್ವಚ್ಛವಾಗಬೇಕು ಎಂದು ಯತ್ನಾಳ್‌ ಹೇಳಿದರು.

    ಪ್ರಧಾನಿ ಮೋದಿ ಅವರು ಕೇವಲ ಆರು ಗಂಟೆಗಳ ಕಾಲ ವಿಶ್ರಾಂತಿ ಮಾಡಿ ತಮ್ಮ ಇಡೀ ಜೀವನವನ್ನೇ ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ. ನಾವೆಲ್ಲ ಹೀಗೆ ಮಾಡಿಕೊಂಡು ಹೋದರೆ ಹೇಗೆ? ನಮಗೆ ಪೂರ್ಣ ಬಹುಮತ ಇಲ್ಲದಿದ್ದರೆ ಯಾವುದೇ ನಿರ್ಣಯ ತೆಗೆದುಕೊಳ್ಳಲು ಆಗಲ್ಲ. ಕಳೆದು ಬಾರಿ ನಮಗೆ ಬಹುಮತ ಇತ್ತು. ಹೀಗಾಗಿ ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ಕಲಂ ನಡಿ ನೀಡಲಾಗಿದ್ದ ವಿಶೇಷ ಸ್ಥಾನಮಾತ ತೆಗೆಯಲು ಸಾಧ್ಯವಾಯಿತು. ಅಲ್ಲದೇ, ರಾಮಮಂದಿರ ನಿರ್ಮಾಣ ಮಾಡಿ ಹಲವಾರು ಕಾನೂನುಗಳನ್ನು ಬದಲಾವಣೆ ಮಾಡಲು ಅನುಕೂಲವಾಯಿತು.

    ನಮಗೆ ಬಹುಮತ ಇದ್ದ ಕಾರಣ ಈ ಎಲ್ಲ ಕೆಲಸ ಮಾಡಿದ್ದೇವೆ. ಈಗ ಪ್ರತಿಯೊಂದಕ್ಕೂ ಮಿತ್ರ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು. ಭವಿಷ್ಯದಲ್ಲಿ ದೊಡ್ಡ ದೊಡ್ಡ ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದರೆ ಎಲ್ಲರನ್ನು ಒಪ್ಪಿಗೆ ಪಡೆದು ನಿರ್ಣಯ ಮಾಡುವ ಪರಿಸ್ಥಿತಿ ಬರುತ್ತದೆ. ಲೋಕಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದ್ದಕ್ಕೆ ಮಿತ್ರ ಪಕ್ಷಗಳ ಒಪ್ಪಿಗೆ ಅನಿವಾರ್ಯ ಎಂದು ಬಸನಗೌಡ ಪಾಟೀಲ ಯತ್ನಾಳ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap