ಕಲಬುರಗಿ:
ಇತ್ತೀಚೆಗೆ ಚಿಕ್ಕ ವಯಸ್ಸಿನವರಲ್ಲೂ ಆತಂಕಕಾರಿ ಎನ್ನುವಷ್ಟು ಸಂಖ್ಯೆಯಲ್ಲಿ ಹೃದಯಾಘಾತ , ಹೃದಯ ಸ್ತಂಭನದಿಂದ ಸಾವು ಉಂಟಾಗುತ್ತಿದೆ. ಇದೀಗ ಕಲಬುರಗಿಯಲ್ಲಿ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕನೊಬ್ಬ ಕುಸಿದು ಬಿದ್ದು ಸಾವನಪ್ಪಿದ್ದಾನೆ. ಕಲಬುರಗಿ ತಾಲ್ಲೂಕಿನ ಹತಗುಂದಾ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತಿದ್ದ ಯುವಕ ಕುಸಿದುಬಿದ್ದು ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಯಳವಂತಗಿ (ಕೆ) ಗ್ರಾಮದ ನಿವಾಸಿ ಸಚಿನ್ ಪರಮೇಶ್ವರ ಮಾನೆ (22) ಎಂದು ಗುರುತಿಸಲಾಗಿದೆ. ಘಟನೆ ಕುರಿತು ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾವ ಹೃದಯದ ಸಮಸ್ಯೆಯೂ ಕಾಣಿಸಿಕೊಳ್ಳದ ಯುವಕ ಯುವತಿಯರಲ್ಲಿ ಇದ್ದಕ್ಕಿದ್ದಂತೆ ಹೃದಯ ವೈಫಲ್ಯದಿಂದ ಸಾವನ್ನು ಅಪ್ಪುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ ಎಂಬ ಕಳವಳ ಹೆಚ್ಚುತ್ತಿದೆ. ಇತ್ತೀಚೆಗೆ ಹೊಳೆನರಸೀಪುರ ಪಟ್ಟಣದಲ್ಲಿ ಸಂಧ್ಯಾ (19) ಎಂಬ ಯುವತಿ, ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಅರಕಲಗೂಡು ತಾಲೂಕಿನ ಅಭಿಷೇಕ್ (19) ಎಂಬ ಯುವಕ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೂಡ ಹೃದಯ ಸ್ತಂಭನದಿಂದ ಮೃತಪಟ್ಟ ಘಟನೆಗಳು ತುಮಕೂರು ಮತ್ತಿತರ ಕಡೆ ನಡೆದಿವೆ
ಇಂಥ ಸಾವುಗಳ ಬಗ್ಗೆ ಅಧ್ಯಯನ ನಡೆಸಲು ಒಂದು ತಜ್ಞರ ಸಮಿತಿಯನ್ನು ರಚಿಸಲು ಇತ್ತೀಚೆಗೆ ಕರ್ನಾಟಕ ರಾಜ್ಯ ಸರಕಾರ ಮುಂದಾಗಿತ್ತು. ಈ ಪ್ರಕರಣಗಳು ಕೋವಿಡ್‌ನ ಅಡ್ಡಪರಿಣಾಮ ಎಂಬ ತರ್ಕವನ್ನು ಮುಂದಿಡಲಾಗುತ್ತಿದೆ. ಆದರೆ ಇದು ದೃಢಪಟ್ಟಿಲ್ಲ.