ನಗರದಾದ್ಯಂತ ಸಂಭ್ರಮಾಚರಣೆ, ಕೆಲ ಯುವಕರ ಪುಂಡಾಟ

ಬೆಂಗಳೂರು

    2025ಕ್ಕೆ ಬೈಬೈ ಹೇಳಿ ಹೊಸ ವರ್ಷ 2026ಕ್ಕೆ  ಜನರು ಹಾಯ್ ಹೇಳಿದರು. ದೇಶಾದ್ಯಂತ ಹೊಸ ವರ್ಷವನ್ನು ಸಂಭ್ರಮದಿಂದ ಜನ ಸ್ವಾಗತಿಸಿದರು. ಇತ್ತ ಬೆಂಗಳೂರು  ನಗರ ಸೇರಿದಂತೆ ಕರ್ನಾಟಕದಾದ್ಯಂತ ಹೊಸ ವರ್ಷ 2026ನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಪ್ರತಿಯೊಂದು ಜಿಲ್ಲೆಯಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಡಿಜೆ ಸೌಂಡ್​ಗೆ ಯುವ ಸಮೂಹ ಕುಣಿದು ಕುಪ್ಪಳಿಸಿದೆ.

   ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲದಲ್ಲಿ ಸಂಭ್ರಮಾಚರಣೆ ನಡೆದಿದ್ದು, ಯುವಜನತೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸ್ವಾಗತಿಸಿದರು. ಈ ಮಧ್ಯೆ ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ಓರ್ವ ವ್ಯಕ್ತಿ ಮಹಿಳಾ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿರುವಂತಹ ಘಟನೆ ನಡೆದಿದೆ. ಸದ್ಯ ಆತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

   ಪೊಲೀಸರು ಬಂದೋಬಸ್ತ್‌ನಲ್ಲಿದ್ದಾಗ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾನೆ. ಪೊಲೀಸರು ಆತನನ್ನು ಸಮಾಧಾನ ಮಾಡಲು ಮುಂದಾದಾಗ ಮತ್ತೆ ಕಿರಿಕ್‌ ಮಾಡಿದ್ದಾನೆ. ಕೂಡಲೇ ಅಲ್ಲಿದ್ದ ಇನ್ಸ್‌ಪೆಕ್ಟರ್‌ ಕಪಾಳಕ್ಕೆ ಬಿಗಿದು ಎಳೆದು ಹೊರ ತಂದಿದ್ದಾರೆ. ಕೋರಮಂಗಲದಲ್ಲಿ ಕುಡಿದು ತೂರಾಡುತ್ತಿದ್ದ ಯುವಕನಿಗೆ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕೊನೆಗೆ ಪೊಲೀಸರೇ ಆತನನ್ನು ಕರೆದೊಯ್ದು ಬದಿಗೆ ಕೂರಿಸಿದ್ದಾರೆ.

   ಹೊಸ ವರ್ಷಾಚರಣೆ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದರು. ನಗರದಾದ್ಯಂತ 20,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ 6,000ಕ್ಕೂ ಹೆಚ್ಚು ಸಿಬ್ಬಂದಿ ಕಣ್ಗಾವಲಿಡಲಾಗಿತ್ತು.

    ರಾತ್ರಿ 9 ಗಂಟೆಯಿಂದಲೇ ಜನರು ರಸ್ತೆಗೆ ಬರಲು ಆರಂಭಿಸಿದರು. ರಾತ್ರಿ 10 ಗಂಟೆಯ ಹೊತ್ತಿಗೆ ಬಹುತೇಕ ಪಬ್‌, ಬಾರ್‌ಗಳು , ಕ್ಲಬ್‌ ತುಂಬಿತ್ತು. ಪಾರ್ಟಿ ವೇರ್ ಧರಿಸಿ ತಂಡೋಪ ತಂಡವಾಗಿ ಆಗಮಿಸುತ್ತಿರುವ ಯುವ ಜನತೆ ಆಗಮಿಸಿ ನೃತ್ಯ  ಮಾಡುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದರು. ದೆಹಲಿ, ಅಹಮದಾಬಾದ್, ಕೋಲ್ಕತ್ತಾ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸ್ವಾಗತಿಸಲಾಯಿತು.

Recent Articles

spot_img

Related Stories

Share via
Copy link