ಜೈಪುರ:
ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಯುವತಿಯರು ಭಾನುವಾರ ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ, ತಮಗೆ ಮದುವೆ ಮಾಡುವಂತೆ ಮನವಿ ಸಲ್ಲಿಸಿದ್ದಾರೆ.
ಇಬ್ಬರ ನಡೆಗೆ ಪೊಲೀಸರೂ ಶಾಕ್ ಹಾಕಿದ್ದಾರೆ. ಪಾಲಿ ಜಿಲ್ಲೆಯ ಜೈತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿ ಇಬ್ಬರೂ ಹುಡುಗಿಯರಿಗೆ ತಿಳಿ ಹೇಳುವ ಕೆಲಸ ಮಾಡಿದ್ದಾರೆ. ಆದರೆ ಯುವತಿಯರ ಮೊಂಡುತನ ಕಂಡು ಪೊಲೀಸರು ಇಬ್ಬರ ಕುಟುಂಬಕ್ಕೂ ಮಾಹಿತಿ ನೀಡಿದ್ದಾರೆ. ಆ ಬಳಿಕ ಇಬ್ಬರನ್ನೂ ಮಹಿಳಾ ಸಂತ್ವಾನ ಕೇಂದ್ರಕ್ಕೆ ಕಳುಹಿಸಿ ಕೌನ್ಸ್ ಲಿಂಗ್ ಕೊಡಿಸುವ ಕಾರ್ಯ ಮಾಡಿದ್ದಾರೆ ಎನ್ನಲಾಗಿದೆ.
ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ಇಬ್ಬರು ಯುವತಿಯರು ನೆರೆಹೊರೆ ನಿವಾಸಿಗಳು. ಒಬ್ಬರಿಗೆ 20 ವರ್ಷ, ಇನ್ನೊಬ್ಬರಿಗೆ 25 ವರ್ಷ ವಯಸ್ಸಾಗಿದೆ. ಮೊದಮೊದಲು ಇಬ್ಬರ ನಡುವೆ ಗೆಳೆತನವಿತ್ತು, ಆ ಬಳಿಕ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತಂತೆ. ಸ್ನೇಹ ಪ್ರೀತಿಗೆ ತಿರುಗಿದಾಗ ಮದುವೆಯಾಗಲು ನಿರ್ಧರಿಸಿದ ಯುವತಿಯರು ಮನೆಯವರ ಭಯದಿಂದ ಪೊಲೀಸ್ ಠಾಣೆಗೆ ಬಂದು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ ಇದನ್ನು ಮೊದಲು ಪೊಲೀಸ್ ಠಾಣೆಯ ಸಿಬ್ಬಂದಿ ನಂಬಲಿಲ್ಲ. ಆದರೆ ಇಬ್ಬರ ಬಳಿ ಮಾತನಾಡಿದ ಬಳಿಕ ಅವರಿಗೆ ಕೌನ್ಸಲಿಂಗ್ ಕೊಡಿಸುವ ಕೆಲಸ ಮಾಡ್ತಿದ್ದೇವೆ ಎಂದು ವಿವರಿಸಿದ್ದಾರೆ.
ಇಬ್ಬರು ಯುವತಿಯರು ಪೊಲೀಸ್ ಠಾಣೆಯ ಎಸ್‌ಎಚ್‌ಒ ಬಳಿ ಬಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಂತೆ. ಅನಿರೀಕ್ಷಿತ ಸಂದರ್ಭ ಎದುರಾದ ಕರ್ತವ್ಯ ಪ್ರಜ್ಞೆ ಮೆರೆದ ಎಸ್‌ಎಚ್‌ಒ ಅಧಿಕಾರಿ ಮೊದಲು ತಮ್ಮ ಮಟ್ಟದಲ್ಲಿಯೇ ಇಬ್ಬರಿಗೆ ತಿಳಿ ಹೇಳಲು ಪ್ರಯತ್ನಿಸಿದರಂತೆ.
ಆದರೆ ಯುವತಿಯರಿಬ್ಬರು ಹಠ ಮಾಡಿ ಅವರ ಮಾತನ್ನು ಕೇಳದೇ ಇದ್ದಾಗ ಯುವತಿಯರ ಕುಟುಂಬ ಸದಸ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರಂತೆ. ಇಷ್ಟಾದರೂ ಇಬ್ಬರೂ ಪೊಲೀಸ್ ಠಾಣೆಯಿಂದ ಮನೆಗೆ ವಾಪಸ್ ಹೋಗಲು ನಿರಾಕರಿಸಿ ಸಹಾಯ ಮಾಡುವಂತೆ ಅಲ್ಲಿಯೇ ಉಳಿದುಕೊಂಡಿದ್ದರಂತೆ. ಕೊನೆಗೆ ಅಚ್ಚರಿಯ ಘಟನೆಯಿಂದ ಸುಸ್ತಾಗಿದ್ದ ಪೊಲೀಸರು ಇಬ್ಬರನ್ನೂ ಸಂಜೆ ಪಾಲಿನಲ್ಲಿರುವ ಮಹಿಳಾ ಸಂತ್ವಾನ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದು, ಅಲ್ಲಿಯೇ ಆಶ್ರಯ ನೀಡಿ ತಜ್ಞ ವೈದ್ಯರಿಂದ ಇಬ್ಬರಿಗೂ ಕೌನ್ಸೆಲಿಂಗ್ ಕೊಡಿಸುವ ಕಾರ್ಯ ಮಾಡ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.