ಮುಂಬಯಿ
ಭಾರತ ತಂಡದ ಮಾಜಿ ಆಲ್‌ರೌಂಡರ್, ಎರಡು ವಿಶ್ವಕಪ್ ವಿಜೇತ ತಂಡದ ಸದಸ್ಯ ಯುವರಾಜ್ ಸಿಂಗ್ ಅವರು ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಸ್ಥಾಪಿಸುವ ಮೂಲಕ ಮದ್ಯ ಲೋಕದ ಬ್ಯುಸಿನೆಸ್‌ಗೆ ಕಾಲಿಟ್ಟಿದ್ದಾರೆ. “ಫಿನೋ” ಹೆಸರಿನ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ವೊಂದನ್ನು ಯುವಿ ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ.
“ಫಿನೋ” ಅನ್ನು ಭಾರತದಲ್ಲಿ ಹರಿಯಾಣ, ದೆಹಲಿ, ಮಹಾರಾಷ್ಟ್ರ ಮತ್ತು ಆಯ್ದ ಸುಂಕ ರಹಿತ ಅಂಗಡಿಗಳಲ್ಲಿ ಮಾರಾಟ ಮಾಡಲಿದ್ದಾರೆ. ಈ ಮದ್ಯದ ಆರಂಭಿಕ ಬೆಲೆ ಸುಮಾರು 14,000 ರೂ. “ವೈಫಲ್ಯವು ಒಂದು ಆಯ್ಕೆಯಲ್ಲ” ಟ್ಯಾಗ್ ಲೈನ್ ಹೊಂದಿರುವ ಈ ಆಲ್ಕೋಹಾಲ್ ಉತ್ಪನ್ನವು ಈಗಾಗಲೇ ಮುಂಬೈನಲ್ಲಿ ಖರೀದಿಗೆ ಲಭ್ಯವಿದಿದೆ.
ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ‘ಪಾಂಟಿಂಗ್ ವೈನ್ಸ್’ ಎಂಬ ವೈನ್ ವ್ಯವಹಾರವನ್ನು ನಡೆಸುತ್ತಿದ್ದಾರೆ. ಅವರ ಕಂಪನಿಯ ವೈನ್‌ಗಳು ಆಸ್ಟ್ರೇಲಿಯಾ ಮತ್ತು ನ್ಯೂಝಿಲೆಂಡ್ನಲ್ಲಿ ಮಾತ್ರವಲ್ಲದೆ ಭಾರತದಲ್ಲೂ ಲಭ್ಯವಿದೆ. ಇಂಗ್ಲೆಂಡ್‌ನ ಇಯಾನ್ ಬೋಥಮ್ ಕೂಡ ಪ್ರಮುಖ ವೈನ್ ಕಂಪನಿಯನ್ನು ನಡೆಸುತ್ತಿದ್ದಾರೆ. 2018 ರಲ್ಲಿ ಸ್ಥಾಪಿಸಲಾದ ಈ ವೈನ್ ಕಂಪೆನಿಯು ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಮಾರಾಟವನ್ನು ವಿಸ್ತರಿಸಿಕೊಂಡಿದೆ.
ಗುರುಗ್ರಾಮದ ಕೋಕಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುರೇಶ್ ರೈನಾ, ಯಜುವೇಂದ್ರ ಚಾಹಲ್ ಮತ್ತು ಮೊಹಮ್ಮದ್ ಕೈಫ್ ಅವರಂತಹ ಅನುಭವಿ ಆಟಗಾರರು ಭಾಗವಹಿಸಿದ್ದರು. ಅವರೆಲ್ಲರೂ ಯುವರಾಜ್ ಅವರ ಹೊಸ ಸಾಹಸಕ್ಕೆ ಶುಭ ಹಾರೈಸಿದರು.
2000ರಲ್ಲಿ ಕೀನ್ಯಾ ವಿರುದ್ಧ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಯುವರಾಜ್, ಭಾರತ ಪರ 40 ಟೆಸ್ಟ್, 304 ಏಕದಿನ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ. 2011 ರಲ್ಲಿ ಭಾರತ ಏಕದಿನ ವಿಶ್ವಕಪ್ ಗೆದ್ದಾಗ ಈ ದಂತಕಥೆಯ ಆಲ್‌ರೌಂಡರ್ ಪಂದ್ಯಾವಳಿಯ ಆಟಗಾರರಾಗಿದ್ದರು. ಅವರು ಮೂರು ಸ್ವರೂಪಗಳಲ್ಲಿ 11,778 ರನ್ ಮತ್ತು 148 ವಿಕೆಟ್‌ಗಳನ್ನು ಗಳಿಸಿದ್ದಾರೆ.








