ಬೆಂಗಳೂರು:
ನೂರು ಸಿದ್ದರಾಮಯ್ಯ ಬೇಕಿಲ್ಲ, ಓರ್ವ ಜಮೀರ್ ನನ್ನು ಫೇಸ್ ಮಾಡಿ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸಚಿವ ಜಮೀರ್ ಅಹಮ್ಮದ್ ಖಾನ್ ಸವಾಲು ಹಾಕಿದ್ದಾರೆ.
ನನ್ನನ್ನು ಬಂಧಿಸಲು ನೂರು ಸಿದ್ದರಾಮಯ್ಯ ಬೇಕು ಎಂದು ಎಚ್ ಡಿ ಕೆ ಹೇಳಿಕೆಗೆ ತಿರುಗೇಟು ನೀಡಿದ ಜಮೀರ್, ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ಸರ್ಕಾರ ಅಲ್ಲ. ಲೋಕಾಯುಕ್ತ ಎಸ್‌ಐಟಿ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು. ಬುಧವಾರ ಕುಮಾರಸ್ವಾಮಿ ನನ್ನನ್ನು ಯಾರು ಏನು ಮಾಡೋಕೆ ಆಗಲ್ಲ ಎಂದು ಹೇಳಿದ್ದಾರೆ. ಎಸ್‌ಐಟಿ ಅನುಮತಿ ಕೇಳಿರೋದಕ್ಕೆ ಸಿದ್ದರಾಮಯ್ಯ ಯಾಕೆ ಮಧ್ಯೆ ಬರುತ್ತಾರೆ? ಎಸ್‌ಐಟಿ ಅವರು ನವೆಂಬರ್‌ನಲ್ಲಿ ರಾಜ್ಯಪಾಲರಿಗೆ ಅನುಮತಿ ಕೇಳಿದ್ದಾರೆ. ಆದರೆ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಇದನ್ನೇ ನಾವು ರಾಜ್ಯಪಾಲರಿಗೆ ಕೇಳುತ್ತಿರೋದು. ಸಿದ್ದರಾಮಯ್ಯ ಅವರ ಮೇಲೆ ಖಾಸಗಿ ಅವರು ದೂರು ಕೊಟ್ಟಿದ್ದಕ್ಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಕುಮಾರಸ್ವಾಮಿ ವಿರುದ್ಧ ಎಸ್‌ಐಟಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದೆ. ಯಾಕೆ ಕೊಡಲಿಲ್ಲ ಎಂದು ಪ್ರಶ್ನಿಸಿದರು
ಸಿದ್ದರಾಮಯ್ಯ ಅವರನ್ನು ಯಾಕೆ ಈ ಪ್ರಕರಣದಲ್ಲಿ ಮಧ್ಯಕ್ಕೆ ಎಳೆದು ತರ್ತಾರೆ? ರಾಜ್ಯಪಾಲರು ಖಾಸಗಿ ದೂರು ಕೊಟ್ಟಿದ್ದಕ್ಕೆ ಪ್ರಾಸಿಕ್ಯೂಷನ್ ಕೊಟ್ಟಿದ್ದಾರೆ. ನಮ್ಮ ಜಾಗಕ್ಕೆ ಪರಿಹಾರ ಕೊಟ್ಟಿಲ್ಲಾ ಅಂತ ಪತ್ರ ಬರೆದಿದ್ದಾರೆ. 2010ರಲ್ಲಿ ಡಿನೋಟಿಫಿಕೇಷನ್ ಮಾಡಿ ಅವರ ಅಕ್ಕನಿಗೆ ಗಿಫ್ಟ್ ಕೊಟ್ಟಿದ್ದಾರೆ. ಇದೇ ವೇಳೆ ಮುಡಾ ಆ ಜಮೀನನ್ನು ಸೈಟ್ ಮಾಡಿ ಹಂಚಿ ಬೇರೆಯವರಿಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು.ಮುಡಾಗೆ ಸಿದ್ದರಾಮಯ್ಯ ಪತ್ನಿ ಪತ್ರ ಬರೆದಿದ್ದಾರೆ ಸತ್ಯ. ಇದ್ರಲ್ಲಿ ಸಿದ್ದರಾಮಯ್ಯ ಪಾತ್ರ ಏನಿದೆ? ಇವರು ಮಾತ್ರ ಪತ್ರ ಕೊಟ್ಟಿದ್ದಲ್ಲ, ಬಹಳ ಜನ ಇದ್ದಾರೆ.
ಮಾತನಾಡಿದರೆ ಧಮ್ಕಿ ಹಾಕೋದು, ಬ್ಲ್ಯಾಕ್‌ಮೇಲ್ ಮಾಡೋದು. ಇದು ಎಷ್ಟು ದಿನ ನಡೆಯುತ್ತದೆ ಕುಮಾರಸ್ವಾಮಿ ಅವರೇ? ಸಿದ್ದರಾಮಯ್ಯ ಬೇಡ, ನೀವು ಮೊದಲು ಜಮೀರ್‌ನನ್ನು ಫೇಸ್ ಮಾಡಿ. ಬಾಯಿಗೆ ಬಂದಂತೆ ಮಾತನಾಡೋದ ಎಂದು ವಾಗ್ದಾಳಿ ನಡೆಸಿದರು.
ನಾನು ರಾಮನಗರದಲ್ಲಿ ನಿಮಗೆ ಏನು ಕೇಳಿದೆ? ಸಿಎಂ ಆಗಿದ್ದಾಗ ಕುಮಾರಸ್ವಾಮಿ ಎಷ್ಟು ಮನೆ ರಾಮನಗರ ಜನರಿಗೆ ಕೊಟ್ಟಿದ್ದೀರಾ ಎಂದು ಕೇಳಿದೆ. ಸಿಎಂ ಆದರೂ ನಿಮ್ಮ ಜಿಲ್ಲೆಗೆ ಮನೆ ಕೊಟ್ಟಿಲ್ಲ. ಇದನ್ನು ಕೇಳಿದ್ದು ನಾನು. ಇದಕ್ಕೆ ಅವನು ಯಾರು ಒಂದು ಬಸ್‌ಗೆ ಎರಡು ನಂಬರ್ ಹಾಕಿಕೊಂಡು ಓಡಿಸಿದ್ದವನು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಒಂದು ನಂಬರ್ ಎರಡು ಬಸ್‌ಗೆ ಹಾಕಿಸಿ ಓಡಿಸೋನು ಆಗಿದ್ದರೆ 2017ರವರೆಗೆ ನನ್ನನ್ನು ಯಾಕೆ ನಿಮ್ಮ ಜೊತೆ ಇಟ್ಟುಕೊಂಡ್ರಿ ಎಂದು ಪ್ರಶ್ನೆ ಮಾಡಿದರು. ಆ ಬಸ್ ನಮ್ಮ ಚಿಕ್ಕಪ್ಪನದ್ದು. ಈ ವಿಚಾರವಾಗಿ ನಾನು ಕೊರ್ಟ್ ನಲ್ಲಿ ಕ್ಲೀನ್ ಚೀಟ್ ತೆಗೆದುಕೊಂಡಿದ್ದೇನೆ. ಬಿ ರಿಪೋರ್ಟ್ ತಗೊಂಡಿದ್ದೇನೆ. ನೀವೇನು ಮಾಡಿದ್ದಿರಾ ? ನಿಮ್ಮ ಅಕ್ರಮದ ಬಗ್ಗೆ ನಾನು ಬಾಯಿ ಬಿಟ್ಟು ಹೇಳಲಾ? ಎಂದು ಪ್ರಶ್ನಿಸಿದರು. ಒಂದು ಮನೆ ಇಟ್ಟುಕೊಂಡು ಹೊರಗಡೆ ಏನೇನು ಮಾಡಿದ್ದೀರಿ ಎಂದು ನಾನು ಬಾಯಿ ಬಿಡಲಾ? ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ದ ಸಚಿವ ಜಮೀರ್ ಅಹಮದ್ ಖಾನ್ ವಾಗ್ದಾಳಿ ನಡೆಸಿದರು.