ಶ್ರೀನಗರ:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ನಲ್ಲಿ ಏಪ್ರಿಲ್ 22 ರಂದು ನಡೆದ ಭಯೋತ್ಪಾದಕ ದಾಳಿಯ ಭೀಕರ ಘಟನೆಯನ್ನು ಜಿಪ್ಲೈನ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರವಾಸಿಯೊಬ್ಬರು ವಿವರಿಸಿದ್ದಾರೆ. ರಿಷಿ ಭಟ್ ಎಂಬ ಪ್ರವಾಸಿಗ, ತಾನು ಜಿಪ್ಲೈನ್ನಲ್ಲಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಜಿಪ್ಲೈನ್ ಆಪರೇಟರ್ “ಅಲ್ಲಾಹು ಅಕ್ಬರ್” ಎಂದು ಕೂಗಿದ ಕೆಲವೇ ಕ್ಷಣಗಳಲ್ಲಿ ಗುಂಡಿನ ದಾಳಿ ಆರಂಭವಾಯಿತು ಎಂದು ಅವರು ಹೇಳಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಜಿಪ್ಲೈನ್ ಆಪರೇಟರ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮೂಲಗಳ ಪ್ರಕಾರ, ಜಿಪ್ಲೈನ್ ಆಪರೇಟರ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ವಿಚಾರಣೆಗೆ ಒಳಪಡಿಸಿದೆ. “ನಾನು ಜಿಪ್ಲೈನ್ಗೆ ಕುಳಿತಾಗ, ಒಬ್ಬ ವ್ಯಕ್ತಿ ‘ಅಲ್ಲಾಹು ಅಕ್ಬರ್’ ಎಂದು ಕೂಗಿ ತಲೆಯನ್ನು ಎಡಬಲಕ್ಕೆ ತಿರುಗಿಸಿದನು. ಕೆಲವೇ ಕ್ಷಣಗಳಲ್ಲಿ ಆ ಕಡೆಯಿಂದ ಗುಂಡಿನ ದಾಳಿ ಶುರುವಾಯಿತು ಎಂದು ರಿಷಿ ಭಟ್ ತಿಳಿಸಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಭಯೋತ್ಪಾದಕರು ಪ್ರವಾಸಿಗರ ಧರ್ಮವನ್ನು ಪರಿಶೀಲಿಸಿ ಕೊಲೆಗೈದಿದ್ದಾರೆ. ದಾಳಿಕೋರರು ಪುರುಷರಿಗೆ ‘ಕಲ್ಮಾ’ ಓದಲು ಹೇಳಿದ್ದು, ಅದನ್ನು ಓದಲಾಗದವರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಏಪ್ರಿಲ್ 22 ರಂದು, ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನ ಜನಪ್ರಿಯ ಪ್ರವಾಸಿ ತಾಣವಾದ ಬೈಸರನ್ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಬಹುತೇಕ ಇತರ ರಾಜ್ಯಗಳಿಂದ ಬಂದಿದ್ದ 26 ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಈ ಘಟನೆಯ 53 ಸೆಕೆಂಡ್ಗಳ ವಿಡಿಯೋ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ರಿಷಿ ಭಟ್ ಜಿಪ್ಲೈನ್ನಲ್ಲಿ ಪ್ರಯಾಣಿಸುವಾಗ ರೆಕಾರ್ಡ್ ಮಾಡಿದ ದೃಶ್ಯಗಳನ್ನು ತೋರಿಸುತ್ತದೆ. ವಿಡಿಯೋದಲ್ಲಿ ಕೆಲವು ಪ್ರವಾಸಿಗರು ಭಯೋತ್ಪಾದಕರಿಂದ ತಪ್ಪಿಸಿಕೊಂಡು ಓಡಿಹೋಗುವ ದೃಶ್ಯ ಕಾಣಿಸುತ್ತದೆ. ಭಟ್ ಆ ಸಮಯದಲ್ಲಿ ಗುಂಡಿನ ದಾಳಿಯ ಬಗ್ಗೆ ಅರಿವಿಲ್ಲದೆ ಎತ್ತರದಲ್ಲಿದ್ದರು. ಹಿನ್ನೆಲೆಯಲ್ಲಿ ಗುಂಡಿನ ಸದ್ದು ಕೇಳಿಸುತ್ತದೆ.
ವಿಡಿಯೋ ಆರಂಭದಲ್ಲಿ ಜಿಪ್ಲೈನ್ ಆಪರೇಟರ್ “ಅಲ್ಲಾಹು ಅಕ್ಬರ್” ಎಂದು ಕೂಗುವುದು ಕೇಳಿಸುತ್ತದೆ. ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿರುತ್ತದೆ, ಆದರೆ ಕೆಲವೇ ಕ್ಷಣಗಳಲ್ಲಿ ಜನರು ಓಡಾಡುವುದು ಕಾಣಿಸುತ್ತದೆ. ಆ ಸಮಯದಲ್ಲಿ ಬೈಸರನ್ ಮೇಡೋನಲ್ಲಿ 100 ಕ್ಕೂ ಹೆಚ್ಚು ಪ್ರವಾಸಿಗರಿದ್ದರು. ಓಡುವಾಗ ಒಬ್ಬ ಪ್ರವಾಸಿಗ ಬಿದ್ದಿರುವ ದೃಶ್ಯವೂ ವಿಡಿಯೋದಲ್ಲಿ ಕಾಣಿಸುತ್ತದೆ.
