ತುಮಕೂರು
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಪ್ರಕರಣದ ಆರೋಪಿಗೆ ಡಿವೈಎಸ್ಪಿ ಅವರು ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆ ನಡೆದಿದೆ.
ತುಮಕೂರು ತಾಲ್ಲೂಕು ವಸಂತನರಸಾಪುರ ಹತ್ತಿರ ಲಿಂಗದಹಳ್ಳಿ ಅರಣ್ಯಪ್ರದೇಶದಲ್ಲಿ ಶನಿವಾರ ಮದ್ಯಹ್ನ ಸುಮಾರು 1-45 ರಲ್ಲಿ ಈ ಘಟನೆ ಸಂಭವಿಸಿದ್ದು, ಆರೋಪಿಯ ಕಾಲುಗಳಿಗೆ ಗಾಯವಾಗಿದೆ.
ಮಾಜಿ ಮೇಯರ್ ರವಿಕುಮಾರ್ ಹತ್ಯೆಗೆ ಸಂಬಂಧಿಸಿದ ಆರೋಪಿ ಕುಂದೂರಿನ ರಾಜೇಶ ಅಲಿಯಾಸ್ ರಾಜಿ ಅಲಿಯಾಸ್ ಕುಂದೂರು ರಾಜಿ (30) ಎಂಬಾತನನ್ನು ಪೊಲೀಸರು ಕರೆದೊಯ್ಯುತ್ತಿದ್ದರು. ರವಿಕುಮಾರ್ ಅವರ ಹತ್ಯೆ ಸಂದರ್ಭದಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಲಾಂಗ್ ಮತ್ತು ಮೊಬೈಲ್‌ಗಳನ್ನು ತನಿಖೆಗಾಗಿ ವಶಪಡಿಸಿಕೊಳ್ಳಲು ತುಮಕೂರು ತಾಲ್ಲೂಕು ವಸಂತನರಸಾಪುರ ಹತ್ತಿರ ಲಿಂಗದಹಳ್ಳಿ ಅರಣ್ಯಪ್ರದೇಶದಲ್ಲಿ ಆತನನ್ನು ಪೊಲೀಸರು ಕರೆದೊಯ್ಯುತ್ತಿದ್ದರು.
ಆಗ ಈತ ಏಕಾಏಕಿ ಪೊಲೀಸರನ್ನು ತಳ್ಳಿದ್ದಾನೆ. ಕೋರ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ಅವರ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಲು ಹೋದಾಗ, ಅದು ಅವರ ತೋಳಿನ ಮೇಲೆ ಬಿದ್ದು ಅವರು ಗಾಯಗೊಂಡಿದ್ದಾರೆ. ಬಳಿಕ ಆರೋಪಿಯು ಸಬ್‌ಇನ್ಸ್‌ಪೆಕ್ಟರ್ ಬಳಿ ಇದ್ದ ರಿವಲ್ವಾರ್ ಅನ್ನು ಕಸಿಯಲು ಹೋದಾಗ, ಜೊತೆಯಲ್ಲಿದ್ದ ತನಿಖಾಧಿಕಾರಿ ನಗರ ಡಿವೈಎಸ್ಪಿ ನಾಗರಾಜ್ ಅವರು ತಕ್ಷಣವೇ ತಮ್ಮ ಬಳಿಯಿದ್ದ ರಿವಲ್ವಾರ್‌ನಿಂದ ಆರೋಪಿ ರಾಜೇಶ್‌ನ ಕಾಲುಗಳಿಗೆ ಗುಂಡು ಹಾರಿಸಿದರೆಂದು ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಘಟನೆ ನಡೆದ ತಕ್ಷಣವೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರಲ್ಲದೆ, ಗಾಯಗೊಂಡ ಸಬ್‌ಇನ್ಸ್‌ಪೆಕ್ಟರ್ ರವಿಕುಮಾರ್ ಮತ್ತು ಆರೋಪಿ ರಾಜೇಶ್‌ನನ್ನು ಚಿಕಿತ್ಸೆಗಾಗಿ ತುಮಕೂರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.