ಇನ್ನು ಮುಂದೆ ನಿಲ್ಲಲಿವೆ ಈ ನಾಣ್ಯಗಳು ….!

ನವದೆಹಲಿ

     ದಪ್ಪದಾಗಿರುವ ಹಳೆಯ 5 ರೂ ನಾಣ್ಯಗಳನ್ನು ಆರ್​ಬಿಐ ನಿಷೇಧಿಸಿದೆ ಎನ್ನುವಂತಹ ಸುದ್ದಿ ಹರಿದಾಡುತ್ತಿದೆ. ವರದಿಗಳ ಪ್ರಕಾರ ಈ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯಲಾಗಿದೆ. ಇನ್ನೂ ಕೆಲ ವರದಿಗಳ ಪ್ರಕಾರ ಈ ನಾಣ್ಯಗಳ ತಯಾರಿಕೆಯನ್ನು ಸರ್ಕಾರ ನಿಲ್ಲಿಸಿದೆ. ಅದರ ಚಲಾವಣೆ ಮುಂದುವರಿಯಲು ಅಡ್ಡಿ ಇಲ್ಲ ಎನ್ನಲಾಗಿದೆ. ಸದ್ಯ ಎರಡು ಮೂರು ರೀತಿಯ 5 ರೂ ನಾಣ್ಯಗಳು ಚಲಾವಣೆಯಲ್ಲಿವೆ. ಗೋಲ್ಡ್ ಕಾಯಿನ್ ಎಂದು ಜನಪ್ರಿಯವಾಗಿರುವ, ನಿಕಲ್ ಮತ್ತು ಬ್ರಾಸ್​ನಿಂದ (ಹಿತ್ತಾಳೆ) ಮಾಡಿರುವ 5 ರೂ ನಾಣ್ಯ ಇದೆ. ಹೆಚ್ಚು ವ್ಯಾಸವಿರುವ ಅದೇ ಲೋಹಗಳಿಂದ ಮಾಡಿದ ನಾಣ್ಯವೂ ಇದೆ. ಹಿಂದೆ ತಯಾರಿಸಿ ಮಾರುಕಟ್ಟೆಗೆ ಬಿಡಲಾಗಿದ್ದ ದಪ್ಪದಾಗಿರುವ 5 ರೂ ನಾಣ್ಯವೂ ಚಲಾವಣೆಯಲ್ಲಿದೆ.

   ಈ ಪೈಕಿ ದಪ್ಪದಾಗಿರುವ 5 ರೂ ನಾಣ್ಯದ ತಯಾರಿಕೆಯನ್ನು ಆರ್​ಬಿಐ ನಿಲ್ಲಿಸಿದೆ. ಅದರ ಚಲಾವಣೆಯನ್ನೂ ನಿಲ್ಲಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಆರ್​ಬಿಐನಿಂದ ಅಧಿಕೃತ ಹೇಳಿಕೆ ಬಂದಿಲ್ಲ. ಸಾಮಾನ್ಯವಾಗಿ ಒಂದು ನಾಣ್ಯವನ್ನು ಚಲಾವಣೆಯಿಂದ ಹಿಂಪಡೆಯಲು ಹಲವು ಕಾರಣಗಳಿರುತ್ತವೆ. ನಾಣ್ಯದ ಮುಖಬೆಲೆಗಿಂತ ಅದರ ಲೋಹಗಳ ಬೆಲೆ ಹೆಚ್ಚಾಗುವಂತಿಲ್ಲ. ಈ ಕಾರಣಕ್ಕೆ ಆರ್​ಬಿಐ ಈ ಐದು ರೂ ಮುಖಬೆಲೆಯ ನಾಣ್ಯಗಳನ್ನು ಚಲಾವಣೆಯಿಂದ ಹಿಂಪಡೆಯುತ್ತಿರಬಹುದು. ದಪ್ಪಗಿರುವ ಐದು ರೂ ನಾಣ್ಯವನ್ನು ಕರಗಿಸಿ, ಅದರಿಂದ 5 ಶೇವಿಂಗ್ ಬ್ಲೇಡ್​ಗಳನ್ನು ತಯಾರಿಸಲು ಸಾಧ್ಯ. ಒಂದೊಂದು ಬ್ಲೇಡ್ ಅನ್ನೂ 2 ರೂಗೆ ಮಾರಿದರೆ ಅದು 10 ರೂ ಆಗುತ್ತದೆ. ಹೀಗಾಗಿ, ನಾಣ್ಯದ ನಿಜಮೌಲ್ಯವು ಅದರ ಮುಖಬೆಲೆಗಿಂತ ಹೆಚ್ಚೇ ಇರುತ್ತದೆ. ಇದು ನಿಯಮಕ್ಕೆ ವಿರುದ್ಧವಾದುದು ಎನ್ನಲಾಗುತ್ತಿದೆ.

    ವರದಿಗಳ ಪ್ರಕಾರ ಹಳೆಯ ಐದು ರೂ ನಾಣ್ಯಗಳನ್ನು ಬಾಂಗ್ಲಾದೇಶಕ್ಕೆ ಅಕ್ರಮವಾಗಿ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ. ಅಲ್ಲಿ ಇವುಗಳಿಂದ ರೇಜರ್ ಬ್ಲೇಡ್​ಗಳನ್ನು ತಯಾರಿಸಿ ಅಲ್ಲಿಯ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಒಂದು ನಾಣ್ಯದಿಂದ ಅಲ್ಲಿ ಆರು ಬ್ಲೇಡ್​ಗಳನ್ನು ತಯಾರಿಸುತ್ತಿರುವುದು ಗೊತ್ತಾಗಿದೆ.

   ಈ ಕಾರಣಕ್ಕೆ ಆರ್​ಬಿಐ ಈ 5 ರೂ ನಾಣ್ಯದ ಸ್ವರೂಪದಲ್ಲಿ ಬದಲಾವಣೆ ಮಾಡಿದೆ. ತೆಳುವಿರುವ ನಾಣ್ಯವನ್ನು ಬಿಡುಗಡೆ ಮಾಡಿದೆ. ಕಡಿಮೆ ಮೌಲ್ಯದ ವಸ್ತುಗಳನ್ನು ಇದಕ್ಕೆ ಬೆರೆಸಲಾಗುತ್ತಿದೆ. ಇದರಿಂದ ಬ್ಲೇಡ್ ತಯಾರಿಸುವುದು ಸಾಧ್ಯವಾಗುವುದಿಲ್ಲ ಎನ್ನಲಾಗುತ್ತಿದೆ .ಭಾರತದಲ್ಲಿ ಸದ್ಯ 1 ರೂ, 2 ರೂ, 5 ರೂ, 10 ರೂ, 20 ರೂ ನಾಣ್ಯಗಳು ಚಲಾವಣೆಯಲ್ಲಿವೆ. ಸದ್ಯದಲ್ಲೇ 30 ರೂ ಮತ್ತು 50 ರೂ ನಾಣ್ಯಗಳೂ ಚಲಾವಣೆಗೆ ಬರುವ ನಿರೀಕ್ಷೆ ಇದೆ.

Recent Articles

spot_img

Related Stories

Share via
Copy link