ಚಿಕ್ಕಮಗಳೂರಿನಲ್ಲಿ ಹುಲಿ-ಚಿರತೆ ಭಯಕ್ಕೆ ಶಾಲೆ ಬಿಟ್ಟ ಮಕ್ಕಳು : 41 ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕು

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಹುಲಿ ಹಾಗೂ ಚಿರತೆಯ ಭೀತಿಯಿಂದ 41 ಮಕ್ಕಳು ಕಳೆದ 03 ದಿನಗಳಿಂದ ಶಾಲೆಗೆ ಗೈರಾಗಿರುವ ಘಟನೆ ಬೆಳಕಿಗೆ ಬಂದಿದೆ. ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊAಡಿರುವ ಈ ಕಾಡಂಚಿನ ಗ್ರಾಮದಲ್ಲಿ ವನ್ಯ ಜೀವಿಗಳ ಹಾವಳಿ ಹೆಚ್ಚಾಗಿದ್ದು, ಇದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ.

ಬೈರಾಪುರ ಗ್ರಾಮದಿಂದ ಶಾಲೆಗೆ ತೆರಳುವ ರಸ್ತೆ ದಟ್ಟ ಅರಣ್ಯದ ನಡುವೆ ಸಾಗುತ್ತದೆ. ಇದೇ ಮಾರ್ಗದಲ್ಲಿ ಮಂಗಳವಾರ ಚಿರತೆ ಹಾಗೂ ಬುಧವಾರ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಕೆಲ ಮಕ್ಕಳು ಸ್ವತಃ ವನ್ಯ ಜೀವಿಗಳನ್ನು ಕಂಡಿರುವುದಾಗಿ ಹೇಳಿದ್ದು, ಭಯದಿಂದ ಶಾಲೆಗೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಪೋಷಕರೂ ಸಹ ಅವರನ್ನು ಶಾಲೆಗೆ ಕಳುಹಿಸಲು ನಿರಾಕರಿಸಿದ್ದಾರೆ.

ಅಧಿಕಾರಿಗಳಿಂದ ಮನವೊಲಿಕೆ ಯತ್ನ: ಗ್ರಾಮದ 41 ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದು, ಪ್ರತಿದಿನ ವಿದ್ಯಾರ್ಥಿಗಳು ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ಶಿಕ್ಷಕರು ಶಾಲೆಯಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಯ ತಿಳಿದ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪೋಷಕರು ಹಾಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಎನ್.ಆರ್. ಪುರ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದು, ವನ್ಯ ಜೀವಿಗಳ ಭೀತಿಯಿಂದ ಮಕ್ಕಳ ಶಿಕ್ಷಣ ಅಸ್ತವ್ಯಸ್ತವಾಗಿರುವುದು ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಇದಕ್ಕೆ ಕಟ್ಟುನಿಟಿನ ಕ್ರಮ ಜರುಗಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ:
ಇನ್ನೊಂದೆಡೆ, ಗ್ರಾಮಸ್ಥರು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿದ್ದಾರೆ. ಶಾಲೆಗೆ ತೆರಳಲು ಸುರಕ್ಷಿತ ಪರ್ಯಾಯ ರಸ್ತೆ ನಿರ್ಮಿಸಬೇಕು ಹಾಗೂ ಅಭಯಾರಣ್ಯದ ಗಡಿಭಾಗದಲ್ಲಿ ಕಂದಕ ಮತ್ತು ರಕ್ಷಣಾತ್ಮಕ ಬೇಲಿ ನಿರ್ಮಿಸಿ ವನ್ಯಜೀವಿಗಳು ಗ್ರಾಮ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಮತ್ತು ಚಿರತೆಯ ಚಲನವಲನಗಳ ಮೇಲೆ ನಿಗಾ ಇಟ್ಟು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

 

 

Recent Articles

spot_img

Related Stories

Share via
Copy link