
ಮಂಗಳೂರು: ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನವನ್ನು ಪಕ್ಷದ ರಾಷ್ಟಿಯ ಅಧ್ಯಕ್ಷರೇ ಕೈಗೊಳ್ಳಲಿದ್ದು, ಪಕ್ಷದಿಂದ ಉಚ್ಚಾಟನೆಗೊಂಡ ನಾಯಕರ ಮರುಸೇರ್ಪಡೆ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಕರ್ನಾಟಕ ರಾಜ್ಯ ಉಸ್ತುವಾರಿ ರಾಧಾ ಮೋಹನ ದಾಸ್ ಅಗರ್ವಾಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಿಂದ ಯಾರನ್ನೂ ಹೊರಹಾಕುವುದು ಬಿಜೆಪಿಗೆ ಸಂತೋಷದ ವಿಷಯವಲ್ಲ. ಸಾಮಾನ್ಯವಾಗಿ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗುತ್ತದೆ. ಬಳಿಕ ಅವರ ನಡವಳಿಕೆ, ಪರಿಸ್ಥಿತಿ ಹಾಗೂ ಪಕ್ಷದ ನಿರ್ಧಾರಗಳ ಆಧಾರದಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಯಾವ ಕಾರಣಕ್ಕಾಗಿ ಅವರು ಪಕ್ಷದಿಂದ ಹೊರ ಹೋಗಿದ್ದಾರೆ ಎಂಬುದರ ಬಗ್ಗೆ ಅವರಿಗೇ ಆತ್ಮಾವಲೋಕನ ಆಗಬೇಕು. ರಾಜಕೀಯದಲ್ಲಿ ಸಾಧ್ಯತೆಗಳಿಗೆ ಎಂದಿಗೂ ಬಾಗಿಲು ಮುಚ್ಚಿರುವುದಿಲ್ಲ. ಆದರೆ, ಈ ಕುರಿತು ನಿರ್ದಿಷ್ಟ ವ್ಯಕ್ತಿಗಳ ಬಗ್ಗೆ ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಗರ್ವಾಲ್, ರಾಜ್ಯಾಧ್ಯಕ್ಷರ ನೇಮಕ ರಾಷ್ಟಿçÃಯ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ವಿಷಯವಾಗಿದೆ. ಹಾಲಿ ಅಧ್ಯಕ್ಷರ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಅಂಶಗಳನ್ನು ರಾಷ್ಟಿçÃಯ ನಾಯಕತ್ವ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದರು.
ದಕ್ಷಿಣ ಭಾರತದಲ್ಲಿ ಬಿಜೆಪಿಯ ಬೆಳವಣಿಗೆ ಕುರಿತು ಮಾತನಾಡಿದ ಅವರು, ಕೇರಳ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪಕ್ಷದ ನೆಲೆ ಬಲಗೊಂಡಿದ್ದು, ಹಿಂದೆ ಅಸ್ತಿತ್ವವೇ ಇಲ್ಲದಿದ್ದ ಪ್ರದೇಶಗಳಲ್ಲಿಯೂ ಬಿಜೆಪಿ ಪ್ರಭಾವ ವಿಸ್ತರಿಸಿದೆ. ಕರ್ನಾಟಕದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.








