ಚಳ್ಳಕೆರೆ
ಚಳ್ಳಕೆರೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರು ತಮ್ಮ ಹಲವಾರು ಸಮಸ್ಯೆಗಳಿಗಾಗಿ ಅಧಿಕಾರಿಗಳು ಮತ್ತು ಕಚೇರಿಗಳಿಗೆ ಪ್ರತಿನಿತ್ಯ ಅಲಿಯುತ್ತಿದ್ದು, ಅವರ ಸಮಸ್ಯೆಗೆ ಇನ್ನೂ ಪರಿಹಾರ ಕಂಡುಕೊಳ್ಳುವಲ್ಲಿ ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಮೊದಲ ಆದ್ಯತೆ ನೀಡಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಶನಿವಾರ ಸಂಜೆ ಇಲ್ಲಿನ ತಾಲ್ಲೂಕು ಪಂಚಾಯಿತಿ ನೂತನ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಎರಡನೇ ಬಾರಿಗೆ ಈ ಕ್ಷೇತ್ರದ ಶಾಸಕನಾಗುವ ಸುವರ್ಣವಕಾಶವನ್ನು ಕ್ಷೇತ್ರದ ಮತದಾರರು ನೀಡಿದ್ದು, ಮತದಾರರ ಅಭಿಲಾಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಹೊಣೆ ನನ್ನದಾಗಿದೆ. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸದೇ ಇದ್ದಲ್ಲಿ ಸಾರ್ವಜನಿಕರು ಶಾಸಕರತ್ತ ತಮ್ಮ ಸಮಸ್ಯೆಗಳ ಪರಿಹಾರಕ್ಕೆ ದಾವಿಸುತ್ತಾರೆ. ನಗರ ಹಾಗೂ ಗ್ರಾಮೀಣ ಮಟ್ಟದಲ್ಲಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅವುಗಳ ನಿವಾರಣೆಯ ಬಗ್ಗೆ ಹೆಚ್ಚು ಗಮನ ಹರಿಸುವಂತೆ ತಾಕೀತು ಮಾಡಿದರು.
ಗ್ರಾಮೀಣ ಭಾಗಗಳಿಂದ ಮನೆ, ನಿವೇಶನ, ಸ್ಮಶಾನ, ಸಾಲ ಸೌಲಭ್ಯ, ಗಂಗಾ ಕಲ್ಯಾಣ ಯೋಜನೆ ಮುಂತಾದ ಸಮಸ್ಯೆಗಳ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು. ನಗರಸಭಾ ವ್ಯಾಪ್ತಿಯಲ್ಲಿ ಬರುವ ನನ್ನಿವಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ನಿವೇಶನ ಖಾತೆಗಾಗಿ ಅರ್ಜಿ ನೀಡಲಾಯಿತು. ಕುಂದುಕೊರತೆ ವಿಭಾಗದಲ್ಲಿ ಹೆಚ್ಚಿನ ಪ್ರಮಾಣದ ಅರ್ಜಿಗಳು ಮನೆ, ನಿವೇಶನ, ಬೆಳೆ ಪರಿಹಾರ ಹಾಗೂ ಸಾಲ ಸೌಲಭ್ಯಕ್ಕೆ ಸೇರಿದ್ದವು ಎನ್ನಲಾಗಿದೆ.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಎಲ್.ಈಶ್ವರಪ್ರಸಾದ್, ತಹಶೀಲ್ದಾರ್ ಟಿ.ಸಿ.ಕಾಂತರಾಜು, ಪೌರಾಯುಕ್ತ ಜೆ.ಟಿ.ಹನುಮಂತರಾಜು, ಸಮಾಜ ಕಲ್ಯಾಣಾಧಿಕಾರಿ ಮಮತ, ಸಿಡಿಪಿಒ ಗಿರಿಜಾಂಬ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಾಲತಿ, ಬೆಸ್ಕಾಂ ಇಂಜಿನಿಯರ್ ಶಿವಪ್ರಸಾದ್, ಎಇಇ ಶಶಿಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯ ಪ್ರಕಾಶ್‍ಮೂರ್ತಿ, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ಸದಸ್ಯರಾದ ಜಿ.ವೀರೇಶ್, ರಂಜಿತಾ, ಎಚ್.ಆಂಜನೇಯ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
