ಅನುಭವಿ ಶಾಸಕರ ಹಿಂದೇಟು: ಅಲ್ಪಸಂಖ್ಯಾತ ಮುಖಂಡರಿಗೆ ಒಲಿದ ಸ್ಪೀಕರ್ ಸ್ಥಾನ

ಬೆಂಗಳೂರು

      ರಾಜ್ಯಪಾಲರ ನಂತರದ ಗೌರವಾನ್ವಿತ ಸ್ಥಾನಮಾನದ ಸ್ವೀಕರ್ ಹುದ್ದೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಿರಿಯ ಶಾಸಕರ ಮನೆಬಾಗಿಲಿಗೆ ವಿಧಾನಸಭಾ ಸ್ಪೀಕರ್ ಹುದ್ದೆ ಅರಸಿ ಬಂದರೂ ಬಹುತೇಕರು ಒಲ್ಲೆ ಎಂದಿದ್ದಾರೆ. ಅನುಭವಿಗಳಿಗೆ ಹೇಳಿ ಮಾಡಿಸಿದ ಈ ಹುದ್ದೆಗೆ ಶಕ್ತಿ ಕೇಂದ್ರದಲ್ಲಿ ವಿಶೇಷ ಮನ್ನಣೆ ಇದೆ. ವಿಧಾನಸಭೆ ಸಚಿವಾಲಯ ಹಾಗೂ ಶಾಸಕರ ಭವನದ ಉಸ್ತುವಾರಿ ಹೊಂದಿರುವ ಹಾಗೂ 225 ಶಾಸಕರ ಕಸ್ಟೋಡಿಯನ್ ಆಗಿ ಕಾರ್ಯನಿರ್ವಹಿಸುವ ಸ್ಪೀಕರ್ ಸ್ಥಾನ ಅತ್ಯಂತ ಮಹತ್ವದ್ದು.

      ಇಂತಹ ಹುದ್ದೆ ಇದೀಗ ಕರಾವಳಿಯ ಕಾಂಗ್ರೆಸ್ ಕಲಿ ಯು.ಟಿ. ಖಾದರ್ ಪಾಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಅವರು ವಿಧಾನಸಭಾಧ್ಯಕ್ಷ ಹುದ್ದೆಗೆ ಉಮೇದುವಾರಿಕೆ ಸಲ್ಲಿಸಿದರು. ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ.

      ವಿಶೇಷವೆಂದರೆ ವಿಧಾನಸಭೆ ಚುನಾವಣೆಯಲ್ಲಿ ಸತತ ಒಂಭತ್ತನೇ ಬಾರಿಗೆ ಗೆದ್ದು ಬೀಗಿರುವ ಆರ್ ವಿ ದೇಶಪಾಂಡೆ ಅವರಿಗೆ ಮೊದಲಿಗೆ ಒಲಿದು ಬಂದಿತ್ತು ಈ ಸ್ಥಾನ. ಆದರೆ, ಅವರು, ಕೇವಲ ಹಂಗಾಮಿ ಸ್ಪೀಕರ್ ಆಗಲು ಮಾತ್ರ ಒಪ್ಪಿದರೆ ಹೊರತು, ಜವಾಬ್ದಾರಿಯ ನೊಗ ಹೊರಲು ಖಡಾಖಂಡಿತವಾಗಿ ನಿರಾಕರಿಸಿದರು.

     ಹಿರಿಯ ಶಾಸಕ ಟಿ ಬಿ ಜಯಚಂದ್ರ, ಹೆಚ್ ಕೆ ಪಾಟೀಲ್, ಬಸವರಾಜ ರಾಯರೆಡ್ಡಿ ಹೀಗೆ ಹಲವು ಮಂದಿ ಸ್ಪೀಕರ್ ಸ್ಥಾನ ಅಲಂಕರಿಸಲು ಒಪ್ಪಲಿಲ್ಲ. ಇದಕ್ಕೆ ಕಾರಣಗಳು ಹಲವು.

     ಇದುವರೆಗೆ ಸ್ವೀಕರ್ ಸ್ಥಾನವನ್ನ ಹಲವು ಮಹನೀಯರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಸರಿಸಮಾನರಾಗಿ ಪರಿಗಣಿಸಿ, ರಾಜ್ಯದ ಸಮಸ್ಯೆಗಳ ನಿವಾರಣೆಗೆ ದಾರಿದೀಪವಾಗಿದ್ದಾರೆ. 1952ರಲ್ಲಿ ವಿ ವೆಂಕಟಪ್ಪ ಅವರಿಂದ ಹಿಡಿದು ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಒಟ್ಟು 22 ಮಂದಿ ಸ್ವೀಕರ್ ಹುದ್ದೆ ನಿಭಾಯಿಸಿದ್ದಾರೆ.

    ಇಂತಹ ಅತ್ಯುನ್ನತ ಸ್ಥಾನ ಇದೀಗ ನಿರಾಯಸವಾಗಿ ದೊರೆಯುತ್ತಿದೆ. ಈ ಸ್ಥಾನಕ್ಕೆ ಇಂದು ಪೈಪೋಟಿಯೇ ಇಲ್ಲ. ಇದು ಕೇವಲ ಸಂವಿಧಾನ ಬದ್ದ ಸ್ಥಾನ. ಅಧಿಕಾರಕ್ಕೆ ಬಂದ ಪಕ್ಷದ ಹಿರಿಯ, ಅನುಭವಿಗಳನ್ನ ಸ್ಪೀಕರ್ ಸ್ಥಾನಕ್ಕೇರಿಸಲಾಗುತ್ತದೆ. ಆದರೆ, ಇಂದು ಅಧಿಕಾರಕ್ಕೇರಿರುವ ಕಾಂಗ್ರೆಸ್ ನಲ್ಲಿ ಈ ಸ್ಥಾನವನ್ನು ಬೇಡ ಅನ್ನುವವರ ಸಂಖ್ಯೆಯೇ ಹೆಚ್ಚಾಗಿದೆ.

ಸ್ಪೀಕರ್ ಆದವರಿಗೆ ಸೋಲಿನ ಭಯ:

     ವಿಧಾನಸಭೆ ಸ್ಪೀಕರ್ ಆದವರಿಗೆ ಮೂಲಭೂತವಾಗಿ ಬಹುತೇಕ ಸೋಲಿನ ಭಯ ಕಾಡುತ್ತಿದೆ. ಇದಕ್ಕೆ ಅನೇಕ ನಿದರ್ಶನಗಳೂ ಇವೆ. ಈ ಹಿಂದಿನ ಸರ್ಕಾರದಲ್ಲಿ ಅಂದರೆ ಜುಲೈ 31ರಿಂದ 2019 ರಿಂದ ಮೇ 15, 2023ರವರೆಗೆ ಸ್ಪೀಕರ್ ಆಗಿ ಸೇವೆ ಸಲ್ಲಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ. ಅವರು ಮೂರು ವರ್ಷ ಸ್ಪೀಕರ್ ಸ್ಥಾನವನ್ನು ನಿಭಾಯಿಸಿದ್ದರು. ಆದರೆ, ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ.

     ಕಾಗೇರಿಗಿಂತ ಮುಂಚೆ ಕಾಂಗ್ರೆಸ್ ನ ಹಿರಿಯ ಮುಖಂಡ ಕೆ ಆರ್ ರಮೇಶ್ ಕುಮಾರ್ ಅವರು ಮೇ 25, 2018 ರಿಂದ ಜುಲೈ 29, 2019ರ ವರೆಗೆ ಅಧಿಕಾರದಲ್ಲಿದ್ದರು. ಅವರೂ ಕೂಡ ಈ ಬಾರಿಯ ಚುನಾವಣೆಯಲ್ಲಿ ಸೋತಿದ್ದಾರೆ.

     ಜುಲೈ5, 2016ರಿಂದ ಮೇ 15, 2018ರವರೆಗೆ ಇದ್ದ ಕೆ ಬಿ ಕೋಳಿವಾಡ ಅವರೂ ಮುಂದಿನ ಚುನಾವಣೆಯಲ್ಲಿ ಸೋತಿದ್ದರು. ಸಾಗರದ ಕಾಗೋಡು ತಿಮ್ಮಪ್ಪ ಅವರು ಮೇ 31, 2013ರಿಂದ ಜುಲೈ 5, 2016ರವರೆಗೆ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ್ದರು. ಅವರು ಕೂಡ ತಮ್ಮ ಮುಂದಿನ ಚುನಾವಣೆಯಲ್ಲಿ ಸೋತಿದ್ದರು. ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯಲ್ಲಿ ಗೆದ್ದ ಏಕೈಕ ವ್ಯಕ್ತಿ ಎಂದರೆ ಕೆ ಜಿ ಬೋಪಯ್ಯ ಮಾತ್ರ.

     ಇನ್ನೂ ಯುವಕ ಹಾಗೂ ರಾಜಕಾರಣದಲ್ಲಿ ಸಾಕಷ್ಟು ದೂರ ಸಾಗಬೇಕಾಗಿರುವ ಯು ಟಿ ಖಾದರ್ ಈ ಬಾರಿ ಕರಾವಳಿ ಭಾಗದಿಂದ ಮತ್ತೊಮ್ಮೆ ಸಚಿವರಾಗುವ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಅವರನ್ನು ಸ್ಪೀಕರ್ ಸ್ಥಾನಕ್ಕೆ ಒಪ್ಪಿಸುವಲ್ಲಿ ಕಾಂಗ್ರೆಸ್ ಮುಖಂಡರು ಯಶಸ್ವಿಯಾಗಿದ್ದಾರೆ. ವೈಕುಂಟ ಬಾಳಿಗ ಅವರು ಈ ಹಿಂದೆ ಕರಾವಳಿಯಿಂದ ಸ್ಪೀಕರ್ ಆಗಿದ್ದವರು, ಈಗ ಮತ್ತೊಮ್ಮೆ ಸ್ಪೀಕರ್ ಸ್ಥಾನ ಕರಾವಳಿ ಭಾಗಕ್ಕೆ ಸಿಕ್ಕಿದ್ದು, ಅವರು ವಿಧಾನಸಭೆಯ ಪರಂಪರೆಯನ್ನು ಎತ್ತಿಹಿಡಿಯುತ್ತಾರೋ ಕಾದುನೋಡಬೇಕಾಗಿದೆ.

ಖಾದರ್ ಹಿನ್ನೆಲೆ

      2008 ರಲ್ಲಿ ತಮ್ಮ ತಂದೆಯವರ ನಿಧನದಿಂದ ತೆರವಾದ ಶಾಸಕ ಸ್ಥಾನಕ್ಕೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ನಂತರ ಅವರು ಸತತವಾಗಿ ಐದು ಬಾರಿ ಗೆದ್ದಿದ್ದಾರೆ. ತಾವು ಶಾಸಕರಾಗಿದ್ದ 2008 ರಿಂದ 2013 ರ ಅವಧಿಯಲ್ಲಿ ವಿಧಾನಸಭೆಯ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಸದನ ವೀರ ಹಾಗೂ ಶೈನಿಂಗ್ ಇಂಡಿಯಾ ಪ್ರಶಸ್ತಿಗೂ ಭಾಜನರಾಗಿದ್ದರು.

       2013ರ ಸಿದ್ದರಾಮಯ್ಯ ಸಂಪುಟದಲ್ಲಿ ಆರೋಗ್ಯ ಮತ್ತು ಆಹಾರ ಸಚಿವರಾಗಿದ್ದರು. 2018 ರ ಮೈತ್ರಿ ಸರಕಾರದಲ್ಲಿ ನಗರಾಭಿವೃದ್ದಿ ಮತ್ತು ವಸತಿ ಸಚಿವರಾಗಿ ಕೆಲಸ ಮಾಡಿದ್ದರು. 2021 ರಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾಗಿ ಸರ್ಕಾರದ ಲೋಪದೋಷಗಳಿಗೆ ಸಾಣೆ ಹಿಡಿದಿದ್ದರು.

        ಸ್ಪೀಕರ್ ಸ್ಥಾನ ಅಲಂಕರಿಸಲು ಹಿರಿಯ ನಾಯಕರು ನಿರಾಕರಿಸಿದ ಕಾರಣ ರಾತ್ರಿಯೇ ಬೆಂಗಳೂರಿಗೆ ಬಂದಿಳಿದಿದ್ದ ಎಐಸಿಸಿ ನಾಯಕರು, ತಡರಾತ್ರಿಯಲ್ಲಿ ಯು.ಟಿ ಖಾದರ್ ಅವರನ್ನು ಕರೆಸಿಕೊಂಡು ಚರ್ಚಿಸಿ ಒಪ್ಪಿಸಿದ್ದಾರೆ. ಖುದ್ದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಹಾಗೂ ಉಸ್ತುವಾರಿ ಸುರ್ಜೇವಾಲಾ ಅವರು ಎರಡು ವರ್ಷಗಳ ಸಚಿವ ಸ್ಥಾನವನ್ನಾಗಿ ನೀಡುವುದಾಗಿ ಮನವೊಲಿಸಿದ್ದಾರೆ.

ಖಾದರ್ ಪ್ರತಿಕ್ರಿಯೆ

      ಈ ಕುರಿತು ಪ್ರತಿಕ್ರಿಯೆ ನೀಡಿದ ಯು ಟಿ ಖಾದರ್, ಸಂವಿಧಾನ ಬದ್ದ ಗೌರವ ಹುದ್ದೆ ಇದು. ಹೈಕಮಾಂಡ್ ಹೇಳಿದ ಕಾರಣ ನಾನು ಒಪ್ಪಿದ್ದೇನೆ. ಸ್ಪೀಕರ್ ಎಲ್ಲರಿಗೂ ಸಿಗಲ್ಲ. ಹಿಂದೆ ಸಚಿವರಾಗಿ ಕೆಲಸ ಮಾಡಿದ್ದೇನೆ. ಇಂದು ಸ್ಪೀಕರ್ ಆಗಿ ಎಂದು ಸೂಚನೆ ಕೊಟ್ಟಿದ್ದಾರೆ. ಇನ್ನು ಸ್ಪೀಕರ್ ಆದವರು ಸೋಲುತ್ತಾರೆ ಎಂಬ ವಿಚಾರ ಕುರಿತು ಮಾತನಾಡಿದ ಅವರಿಗೆ, ಮೂಡನಂಬಿಕೆಯನ್ನು ನಾನು ನಂಬಲ್ಲ. ಜನರ, ಪಕ್ಷದ, ಕ್ಷೇತ್ರದ ಆಶೀರ್ವಾದ ನನ್ನ ಮೇಲಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap