ಇಂದಿರಾ ಕ್ಯಾಂಟೀನ್‍ನಲ್ಲಿ ಕಳಪೆ ಆಹಾರ ವಿತರಣೆ

ಕೊರಟಗೆರೆ:

ಖುದ್ದು ಆಹಾರ ಸೇವಿಸಿ ಅಸಮಾಧಾನ ವ್ಯಕ್ತಪಡಿಸಿದ ತಹಸೀಲ್ದಾರ್

      ಬಡವ, ನಿರ್ಗತಿಕ, ಶ್ರಮಿಕರು ಹಾಗೂ ಯಾವುದೇ ಸಾರ್ವಜನಿಕರು ಹಸಿವಿನಿಂದ ಬಳಬಾರದು ಎಂಬ ಆಶಯದಿಂದ ಮಾಜಿ ಸಿಎಂ ಸಿದ್ಧರಾಮಯ್ಯನವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಹಸಿದವರಿಗೆ ಆಹಾರ ನೀಡಲು ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಎಂಬ ಮಹತ್ವದ ಯೋಜನೆಯು ಕಳಪೆ ಆಹಾರ ವಿತರಣೆಯ ಮೂಲಕ ತಾಲ್ಲೂಕಿನಲ್ಲಿ ಹಳ್ಳ ಹಿಡಿದಿದ್ದು, ಇಲ್ಲಿನ ಇಂದಿರಾ ಕ್ಯಾಂಟೀನ್‍ನವರು ಕಳಪೆ ಆಹಾರ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ.

ಕಡಿಮೆ ಬೆಲೆಗೆ ಆಹಾರ :

ಈ ಯೋಜನೆಯಡಿ ಬೆಳಗ್ಗೆ 5 ರೂ.ಗೆ ತಿಂಡಿ ಹಾಗೂ 10 ರೂ. ಗೆ ಮಧ್ಯಾಹ್ನ ಮತ್ತು ರಾತ್ರಿಯ ಊಟ ಕೊಡಲಾಗುತ್ತದೆ. ಬಡವರ, ಅಸಹಾಯಕರ, ಶಾಲಾ ವಿದ್ಯಾರ್ಥಿಗಳು ಸೇರಿದಂತೆ ನಿರ್ಗತಿಕ ಜನರಿಗೆ ಹಸಿವು ನೀಗಿಸುವ ಈ ಯೋಜನೆಯಡಿ ನಿರ್ಮಾಣವಾಗಿರುವ ಪಟ್ಟಣದ ಇಂದಿರಾ ಕ್ಯಾಂಟೀನ್‍ನಲ್ಲಿ ಕಳಪೆ ಗುಣಮಟ್ಟದಿಂದ ಆಹಾರ ವಿತರಣೆಯಾಗುತ್ತಿದೆ ಎಂದು ಪಟ್ಟಣದ ಕೆಲ ನಾಗರಿಕರು ಆರೋಪಿಸಿದ್ದಾರೆ.

ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ :

ರಾಜ್ಯದಲ್ಲಿ ಹಸಿವಿನಿಂದ ಯಾರು ಇರಬಾರದೆಂಬ ಆಶಯದಿಂದ ಇಂದಿರಾ ಕ್ಯಾಂಟೀನ್ ಅನ್ನು ರಾಜ್ಯಾದ್ಯಂತ ಸ್ಥಾಪಿಸಲಾಗಿತ್ತು. ಕೊರಟಗೆರೆ ಪಟ್ಟಣದಲ್ಲಿಯೂ ಸಹ ಡಾ.ಜಿ.ಪರಮೇಶ್ವರ್ ಅವರು 1 ಇಂದಿರಾ ಕ್ಯಾಂಟೀನ್‍ಗೆ ಚಾಲನೆ ನೀಡಿ, ಉತ್ತಮ ಗುಣಮಟ್ಟದ ಶುಚಿಯಾದ ಆಹಾರ ವಿತರಿಸಲು ಸಂಬಂಧಪಟ್ಟವರಿಗೆ ಸೂಚನೆಯನ್ನೂ ನೀಡಿದ್ದರು,

ಅದರಂತೆ ಮೊದ ಮೊದಲು ಶುಚಿ-ರುಚಿಯಾಗಿ ಆಹಾರವನ್ನು ತಯಾರಿಸಿ ವಿತರಿಸುತ್ತಿದ್ದ ಇಂದಿರಾ ಕ್ಯಾಂಟೀನ್‍ನ ಆಹಾರ ಪೂರೈಕೆಯ ಗುತ್ತಿಗೆದಾರರು ಬರಬರುತ್ತ ಕಳಪೆ ಹಾಗೂ ರುಚಿ ಇಲ್ಲದ ಕಳಪೆ ಆಹಾರವನ್ನು ವಿತರಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಬೇಸರ ವ್ಯಕ್ತ ಪಡಿಸಿದ ತಹಸೀಲ್ದಾರ್ :

ಈ ಘಟನೆ ಬೆಳಕಿಗೆ ಬಂದ ತಕ್ಷಣ ತಹಸೀಲ್ದಾರ್ ನಹೀದಾ ಜಮ್ ಜಮ್ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ, ಆಹಾರದ ಗುಣಮಟ್ಟವನ್ನು ಖುದ್ದು ತಾವೇ ಆಹಾರವನ್ನು ಸೇವಿಸುವ ಮೂಲಕ ಪರಿಶೀಲಿಸಿದರು. ನಂತರ ಆಹಾರದಲ್ಲಿ ರುಚಿ-ಶುಚಿ ಇಲ್ಲದ್ದನ್ನು ಕಂಡು ಸಾಂಬಾರಿನಲ್ಲಿ ತರಕಾರಿ ಮತ್ತು ಬೇಳೆ-ಕಾಳುಗಳು ಇಲ್ಲವೆಂದು ಕ್ಯಾಂಟೀನ್ ಸಿಬ್ಬಂದಿ ಮೇಲೆ ಬೇಸರ ವ್ಯಕ್ತಪಡಿಸಿದರು.

ಇಲ್ಲಿಯ ತನಕ ಯಾವುದೇ ದೂರು ಹಾಗೂ ಆರೋಪಗಳು ಬಂದಿರಲಿಲ್ಲ. ಈಗ ಕೆಲವು ಸಾರ್ವಜನಿಕರಿಂದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕಳಪೆ ಆಹಾರ ವಿತರಿಸುತ್ತಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ ಟೆಂಡರ್‍ದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.

-ಲಕ್ಷ್ಮಣ್, ಪಪಂ ಮುಖ್ಯಾಧಿಕಾರಿ

ತಹಸೀಲ್ದಾರ್ ಅಸಮಾಧಾನ : \

ಇಂದಿರಾ ಕ್ಯಾಂಟೀನ್‍ನಲ್ಲಿ ಕುಡಿಯಲು ನೀರು ಇಲ್ಲ, ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿಲ್ಲ, ತರಕಾರಿ ಮತ್ತು ಕಾಳುಗಳಿಲ್ಲದೆ ರುಚಿ ಇಲ್ಲದ ಆಹಾರವನ್ನು ನೀಡುತ್ತಿದ್ದಾರೆ, ಶುದ್ಧತೆ ಇಲ್ಲ ಆದ್ದರಿಂದ ಸಂಬಂಧ ಪಟ್ಟವರಿಗೆ ನೋಟಿಸ್ ನೀಡಿದ್ದೇವೆ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಲೋಪ ಕಂಡುಬಂದರೆ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು.

-ನಹೀದಾ ಜಮ್‍ಜಮ್  ತಹಸೀಲ್ದಾರ್

                                         -ರಂಗಧಾಮಯ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link