ಇನ್ನೊಂದು ವಾರದಲ್ಲಿ ಬರಪೀಡಿತ ತಾಲ್ಲೂಕುಗಳ ಘೋಷಣೆ ಸಾಧ್ಯತೆ….!

ಬೆಂಗಳೂರು

     ರಾಜ್ಯದಲ್ಲಿ ಆಗಸ್ಟ್ ನಲ್ಲಿ ಶೇ 23 ರಷ್ಟು ಮಳೆ ಕೊರತೆ ಎದುರಾಗಿದ್ದು, ಇದು ಮುಂಗಾರು ಬಿತ್ತನೆ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತಾಗಿದೆ. ಕೃಷಿಕರ ಸ್ಥಿತಿ ಗಂಭೀರವಾಗಿದ್ದು, ಇನ್ನೊಂದು ವಾರದಲ್ಲಿ ಬರಪೀಡಿತ ತಾಲ್ಲೂಕುಗಳನ್ನು ಘೋಷಿಸುವ ಸಾಧ್ಯತೆಗಳಿಗೆ

    ಕಂದಾಯ ಸಚಿವ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಈ ಕುರಿತು ಗಹನವಾದ ಚರ್ಚೆ ನಡೆಯಿತು. ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಮಾರ್ಗಸೂಚಿಯನ್ವಯ ಬರ ಘೋಷಿಸಲು ನಿರ್ಧರಿಸಲಾಗಿದೆ. ಮಳೆ ಕೊರತೆ ಹಾಗೂ ಕೃಷಿ ಸಂಬಂಧಿತ ನಿಖರ ಅಂಕಿಅಂಶಗಳ ಸಲುವಾಗಿ 75 ತಾಲೂಕುಗಳಲ್ಲಿ ಬೆಳೆ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸಚಿವ ಕೃಷ್ಣ ಭೈರೇಗೌಡ ಆದೇಶಿಸಿದ್ದಾರೆ.

     ಬರಘೋಷಣೆಯು ಮಳೆ ಕೊರತೆ, ಶುಷ್ಕ ವಾತಾವರಣ (ಒಣ ಹವೆ), ಬಿತ್ತನೆಯಾದ ಪ್ರದೇಶ, ತೇವಾಂಶ ಕೊರತೆ, ಬೆಳೆಗಳ ಆರೋಗ್ಯ, ಜಲಾಶಯಗಳ ನೀರಿನ ಸಂಗ್ರಹಣೆ, ಅಂತರ್ಜಲ ಮಟ್ಟವನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಈ ಎಲ್ಲಾ ಅಂಶಗಳ ಮೇಲೆ ಬರಕ್ಕೆ ತುತ್ತಾದ ತಾಲ್ಲೂಕುಗಳೆಂದು ಗುರುತಿಸಿದ ನಂತರ ಅಂತಿಮವಾಗಿ ಬರ ವರ್ಗೀಕರಣವು ಬೆಳೆ ಹಾನಿಯ ಪ್ರಮಾಣದ ಮೇಲೆ ಅವಲಂಭಿಸಲಿದೆ.

    ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಬರಕ್ಕೆ ತುತ್ತಾಗಬಹುದಾದ ತಾಲ್ಲೂಕುಗಳನ್ನು ಗುರುತಿಸಿದ್ದು, ಈ ತಾಲ್ಲೂಕುಗಳಲ್ಲಿ ಬೆಳೆ ಹಾನಿ ಸಮೀಕ್ಷೆಯ ನಂತರ ಬೆಳೆಹಾನಿಯು ಶೇ.50ಕ್ಕೂ ಅಧಿಕವಾಗಿದ್ದಲ್ಲಿ ಬರ ಎಂದು ಕೇಂದ್ರಕ್ಕೆ ಪತ್ರ ಬರೆಯಲು ಸಹ ಸಭೆ ನಿರ್ಧರಿಸಿದೆ.

    ಸಚಿವ ಸಂಪುಟ ಉಪ ಸಮಿತಿ ಚರ್ಚೆಯ ನಂತರ ಬರ ಘೋಷಣೆ ಮಾಡಲು ನಿಯಮಾವಳಿಗಳ ಪ್ರಕಾರ ಕಡ್ಡಾಯವಾಗಿ ಬೆಳೆ ಸಮೀಕ್ಷೆ ಮಾಡಬೇಕಾಗುತ್ತದೆ. ಮಾನದಂಡಗಳ ಪ್ರಕಾರ ಅವಶ್ಯಕ ಪ್ರದೇಶಗಳಲ್ಲಿ ಬೆಳೆ ಸಮೀಕ್ಷೆಯನ್ನು ಬಂದು ವಾರದಲ್ಲಿ ಮಾಡಿ, ವರದಿ ಸಲ್ಲಿಸುವಂತೆಯೂ ಸೂಚಿಸಲಾಯಿತು. ಈ ಮಾಹಿತಿ ಪಡೆದು ಬರ ಘೋಷಿಸಲು ತೀರ್ಮಾನಿಸಲಾಗಿದೆ.

    ಆಗಸ್ಟ್ ನಲ್ಲಿ ರಾಜ್ಯಾದ್ಯಂತ ಅನೇಕ ಭಾಗಗಳಲ್ಲಿ ಮಳೆ ಕೊರತೆಯಾಗಿದೆ. ರಾಜ್ಯದಲ್ಲಿ ಜೂನ್ 1 ರಿಂದ ಆಗಸ್ಟ್21 ರವರೆಗೆ 487 ಮಿ.ಮೀ ಮಳೆಯಾಗಿದ್ದು, ವಾಡಿಕೆ ಮಳೆ 635 ಮಿ.ಮೀಗೆ ಹೋಲಿಸಿದಾಗ ಶೇ.23 ರಷ್ಟು ಮಳೆ ಕೊರತೆ ಉಂಟಾಗಿದೆ. ಮುಂಗಾರು ಅವಧಿಗೆ ಒಟ್ಟು 82.35 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಆಗಸ್ಟ್ 4 ರ ಮಾಹಿತಿಯಂತೆ 51.87 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ. ಇದೇ ಅವಧಿಯ ವಾಡಿಕೆ ಬಿತ್ತನೆ 60.26 ಲಕ್ಷ ಹೆಕ್ಟೇರ್ ಗೆ ಹೋಲಿಸಿದರೆ ಶೇ.89 ರಷ್ಟು ಪ್ರಗತಿಯಾಗಿದೆ.

    ಜುಲೈ ತಿಂಗಳಲ್ಲಿ ಬಿತ್ತನೆಯಾದ ಕೆಲವು ಬೆಳೆಗಳು ಆಗಸ್ಟ್ ತಿಂಗಳ ಮಳೆ ಹಾಗೂ ತೇವಾಂಶ ಕೊರತೆ ಅನುಭವಿಸುತ್ತಿವೆ. ಮಳೆ ಕೊರತೆ ಮುಂದುವರೆದ ಪಕ್ಷದಲ್ಲಿ ಬೆಳೆಗಳು ಒಣಗುವ ಸಾಧ್ಯತೆ ಇದೆ.ಒಟ್ಟು 1.82 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಬಿತ್ತನೆಯಾಗಿದ್ದು, ಶೇ.65 ರಷ್ಟು ಮಾತ್ರ ಪ್ರಗತಿಯಾಗಿದೆ. ಕೆಲವೆಡೆ ಮಳೆ ಕಡಿಮೆ ಸುರಿದ ಕಾರಣದಿಂದ ಈರಳ್ಳಿ ಬೆಳೆ ತೇವಾಂಶ ಕೊರತೆ ಅನುಭವಿಸುತ್ತಿವೆ.

    ರಾಜ್ಯದ 14 ಪ್ರಮುಖ ಜಲಾಶಯಗಳ ಸಂಗ್ರಹಣಾ ಸಾಮರ್ಥ್ಯ 896 ಟಿಎಂಸಿ ಗಳಾಗಿದ್ದು, ಪ್ರಸ್ತುತ ಅವಧಿಯಲ್ಲಿ 618 ಟಿಎಂಸಿ ನೀರು ಸಂಗ್ರಹವಾಗಿದೆ. ಇದು ಒಟ್ಟು ಸಂಗ್ರಹಣದ ಶೇ.69 ರಷ್ಟಿದೆ. ಕಳೆದ ಸಾಲಿನ ಇದೇ ಅವಧಿಯಲ್ಲಿ 796 ಟಿಎಂಸಿ ನೀರು ಸಂಗ್ರಹವಾಗಿತ್ತು. ರಾಜ್ಯದ ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಒಟ್ಟು ನೀರು ಶೇಖರಣೆ 114 ಟಿಎಂಸಿಯಷ್ಟಿದ್ದು, ಇಲ್ಲಿಯವರೆಗೆ 80 ಟಿಎಂಸಿ ನೀರು ಸಂಗ್ರಹವಾಗಿದೆ.

     ರಾಜ್ಯದ ಕೃಷ್ಣ ಜಲಾನಯನ ಪ್ರದೇಶದಲ್ಲಿ 6 ಜಲಾಶಯಗಳಿದ್ದು, ಅವುಗಳ ಒಟ್ಟು ಸಾಮರ್ಥ್ಯ 422 ಟಿಎಂಸಿಗಳಾಗಿದ್ದು, ಇಲ್ಲಿಯವರೆಗೆ 348 ಟಿಎಂಸಿ ನೀರಿದೆ. ವಿದ್ಯುತ್ ಉತ್ಪಾದನಾ ಜಲಾಶಯಗಳಾದ ಲಿಂಗನಮಕ್ಕಿ, ಸೂಫ ಮತ್ತು ವರಾಯಿ ಜಲಾಶಯಗಳ ಒಟ್ಟು ಸಾಮರ್ಥ್ಯ 328 ಟಿಎಂಸಿ ಯಾಗಿದ್ದು, ಆದರೆ ಕೇವಲ 165 ಟಿಎಂಸಿ ನೀರು ಶೇಖರಣೆಯಾಗಿದೆ.

    ರಾಜ್ಯದಲ್ಲಿ 115 ಲಕ್ಷ ದನಕರುಗಳು ಹಾಗೂ 155 ಲಕ್ಷ ಕುರಿ, ಮೇಕೆಗಳಿದ್ದು, ಸದ್ಯಕ್ಕೆ 150 ಲಕ್ಷ ಟನ್ ಮೇವು ಲಭ್ಯವಿದ್ದು, 28 ವಾರಗಳ ಬಳಕೆಗೆ ಸಾಕಾಗುತ್ತದೆ. ಆದರೂ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಉಂಟಾಗದಂತೆ ಇಲಾಖೆಯ ಯೋಜನೆಗಳ ಮೂಲಕ ರೈತರಿಗೆ ಮೇವಿನ ಬೀಜ ವಿತರಿಸಿ, ಮೇವು ಬೆಳೆಸಲು,  ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಲಾಗಿದೆ.

    ಕುಡಿಯುವ ನೀರಿನ ಲಭ್ಯತೆಯ ಬಗ್ಗೆ ಚರ್ಚಿಸುತ್ತಾ, ಜಿಲ್ಲಾಧಿಕಾರಿಗಳ ಮಾಹಿತಿಯಂತೆ ಒಟ್ಟು 18 ಗ್ರಾಮಗಳಿಗೆ 24 ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 147 ಗ್ರಾಮಗಳಲ್ಲಿ 161 ಬಾಡಿಗೆ ಆಧಾರದ ಮೇಲೆ ಪಡೆದಿರುವ ಬೋರ್‍ವೆಲ್‍ಗಳ ಮೂಲಕ ನೀರು ಸರಬರಾಜು, 5 ನಗರ ಪ್ರದೇಶಗಳ 26 ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು 11 ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap