ನವದೆಹಲಿ:
ಇವಿಎಂ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಕೆಲವು ಅಂಶಗಳ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿರುವ ಸುಪ್ರೀಂ ಕೋರ್ಟ್, ಇಂದು ಮಧ್ಯಾಹ್ನ 2 ಗಂಟೆಗೆ ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ನ್ಯಾಯಾಲಯದಲ್ಲಿ ಹಾಜರಿರುವಂತೆ ಸೂಚಿಸಿದೆ.
ಇವಿಎಂನಲ್ಲಿ ದಾಖಲಾಗುವ ಮತಗಳ ಕುರಿತಂತೆ ವಿವಿಪ್ಯಾಟ್ ಮೂಲಕ ಸಂಪೂರ್ಣ ಪುನರ್ ಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತಾದ ವಿಚಾರಣೆ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ವಿಭಾಗೀಯ ಪೀಠ, ಕೆಲವು ಅಂಶಗಳ ಕುರಿತಂತೆ ಸ್ಪಷ್ಟನೆ ಬೇಕಿದೆ. ಚುನಾವಣಾ ಆಯೋಗ ನೀಡಿರುವ ಉತ್ತರದಲ್ಲಿ ಕೆಲ ಗೊಂದಲಗಳಿವೆ ಎಂದು ಹೇಳಿದೆ.
ನಾವು ತಪ್ಪು ಆದೇಶ ನೀಡಲು ಬಯಸುವುದಿಲ್ಲ. ನಮ್ಮ ಪರಿಶೀಲನೆ ವೇಳೆ ಗೊಂದಲಗಳು ಕಂಡುಬಂದಿದ್ದು, ಸ್ಪಷ್ಟೀಕರಣವನ್ನು ಪಡೆಯಲು ಯೋಚಿಸಿದ್ದೇವೆ ಎಂದು ಪೀಠವು ಚುನಾವಣಾ ಆಯೋಗದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿಗೆ ತಿಳಿಸಿದೆ.
2 ಗಂಟೆ ವೇಳೆಗೆ ಆಯೋಗದ ಉಪ ಚುನಾವಣಾ ಆಯುಕ್ತ ನಿತೇಶ್ ಕುಮಾರ್ ವ್ಯಾಸ್ ಅವರನ್ನು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಇವಿಎಂ ಕಾರ್ಯನಿರ್ವಹಣೆ ಕುರಿತಂತೆ ಈ ಹಿಂದೆ ವ್ಯಾಸ್ ಸುಪ್ರೀಂಕೋರ್ಟ್ ಗೆ ವಿವರಣೆ ನೀಡಿದ್ದರು.
ಇವಿಎಂನಲ್ಲಿ ಮತಗಳ ಸಂಗ್ರಹ, ಇವಿಎಂ ಕಂಟ್ರೋಲಿಂಗ್ ಯೂನಿಟ್ ನ ಮೈಕ್ರೋ ಚಿಪ್ ಮತ್ತಿತರ ಅಂಶಗಳ ಕುರಿತಂತೆ ಚುನಾವಣಾ ಆಯೋಗದಿಂದ ನ್ಯಾಯಾಲಯ ಸ್ಪಷ್ಟನೆ ಕೇಳಲು ಬಯಸಿದೆ. ವಿವಿಪ್ಯಾಟ್ ಸ್ವತಂತ್ರ ಮತ ಪರಿಶೀಲನಾ ವ್ಯವಸ್ಥೆಯಾಗಿದ್ದು, ಮತದಾರರು ತಮ್ಮ ಮತಗಳನ್ನು ಸರಿಯಾಗಿ ಚಲಾಯಿಸಲಾಗಿದೆಯೇ ಎಂದು ನೋಡಲು ಅನುವು ಮಾಡಿಕೊಡುತ್ತದೆ.