ಬೆಂಗಳೂರು
ಗೋದಾವರಿ ನದಿಯ ನೀರು ಬೀದರ್ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಸಮರ್ಪಕವಾಗಿ ಬಳಕೆ ಆಗಬೇಕಿದ್ದು, ನಮ್ಮ ಪಾಲಿನ 23 ಟಿ.ಎಂ.ಸಿ ನೀರು ಉಪಯೋಗಿಸಿಕೊಳ್ಳಲು ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಗೃಹ ಕಚೇರಿಯಲ್ಲಿ ಉಪ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಸಮಾಲೋಚಿಸಿದ ಈಶ್ವರ ಖಂಡ್ರೆ, ಈಗಾಗಲೇ ಕಾರಂಜಾ ಜಲಾಶಯ, ಅತಿವಾಳ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ ತಮ್ಮ ಸ್ವಕ್ಷೇತ್ರ ಭಾಲ್ಕಿ ತಾಲೂಕಿನ ನೀರಾವರಿ ಪ್ರದೇಶ ಹೆಚ್ಚಳ ಮಾಡಲಾಗಿದೆ.
ಮೆಹಕರ್ ಏತ ನೀರಾವರಿ ಯೋಜನೆ ಕಾರ್ಯಗತಗೊಳಿಸಬೇಕಿದೆ. ಕಾರಂಜಾ ಯೋಜನೆಗೆ ಹಲವು ವರ್ಷಗಳ ಹಿಂದೆ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ದೊರಕಿಲ್ಲ ಎಂಬ ಬೇಡಿಕೆ ಇದೆ. ಕಾರಂಜಾ ಸಂತ್ರಸ್ತರ ದೀರ್ಘ ಕಾಲದ ಬೇಡಿಕೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಒಂದು ಬಾರಿಯ ಆಧಾರದ ಮೇಲೆ ಪರಿಹರಿಸಬೇಕಿದೆ ಮತ್ತು ಬೀದರ್ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಕಾರ್ಯಗತಗೊಳಿಸಬೇಕಿದೆ ಎಂಬ ಅಂಶವನ್ನು ಗಮನಕ್ಕೆ ತಂದರು.
ಕಲ್ಯಾಣ ಕರ್ನಾಟಕ ಭಾಗದ ವಿವಿಧ ನೀರಾವರಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸುವ ಮತ್ತು ಬಾಕಿ ಇರುವ ಯೋಜನೆ ಆರಂಭಿಸುವ ಕುರಿತಂತೆಯೂ ಸಮಾಲೋಚಿಸಿದರು.
ಪಕ್ಷ ಸಂಘಟನೆಗೆ ಒತ್ತು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರೂ ಆದ ಈಶ್ವರ ಖಂಡ್ರೆ ಅವರು, ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮತ್ತು ಲೋಕಸಭಾ ಚುನಾವಣೆಗೆ ಅಣಿಗೊಳಿಸುವ ಕುರಿತಂತೆಯೂ ಗಂಭೀರ ಚರ್ಚೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ