ತುಮಕೂರು : ಕೆರೆಗಳ ಒತ್ತುವರಿ ತೆರವುಗೊಳಿಸಿ ಇಲಾಖೆಗೆ ಹಸ್ತಾಂತರಿಸಿ

ತುಮಕೂರು :

     ಜಿಲ್ಲೆಯಲ್ಲಿ ಕೆರೆಗಳ ಒತ್ತುವರಿಯಾಗಿದ್ದರೆ ಅವುಗಳನ್ನು ತೆರವುಗೊಳಿಸಿ ಸಂಬಂಧಿಸಿದ ಇಲಾಖೆಗೆ ಹಸ್ತಾಂತರಿಸಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

     ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಂದಾಯ ವಿಷಯಗಳ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು, ಕೆರೆಗಳ ಒತ್ತುವರಿ ತೆರವುಗೊಳಿಸುವ ಮೇಲುಸ್ತುವಾರಿಯನ್ನು ಉಪವಿಭಾಗಾಧಿಕಾರಿಗಳಿಗೆ ವಹಿಸಿ ಪ್ರತಿ ತಿಂಗಳಿಗೆ 200 ಕೆರೆಗಳ ಒತ್ತುವರಿ ತೆರವುಗೊಳಿಸಬೇಕೆಂದು ಅವರು ನಿರ್ದೇಶನ ನೀಡಿದರು.

     ಅನಧಿಕೃತ ಕಟ್ಟಡಗಳನ್ನು ನಿಗದಿತ ಅವಧಿಯೊಳಗೆ ತೆರವುಗೊಳಿಸಿ ಸೆಪ್ಟೆಂಬರ್ 1 ರೊಳಗಾಗಿ ವರದಿ ಸಲ್ಲಿಸಲು ಸೂಚಿಸಲಾಗಿದ್ದರೂ ಈವರೆಗೂ ಮಾಹಿತಿ ನೀಡಿರುವುದಿಲ್ಲ. ಕೂಡಲೆ ವರದಿ ನೀಡಬೇಕೆಂದು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಶುಭಾ ಅವರಿಗೆ ಸೂಚನೆ ನೀಡಿದರು.

ಪಹಣಿ ಕಾಲಂ 3 ಮತ್ತು 9 ರ ತಿದ್ದುಪಡಿ:

    ಪಹಣಿ ಕಾಲಂ 3 ಮತ್ತು 9 ರ ತಿದ್ದುಪಡಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 17,662 ಪ್ರಕರಣಗಳು ಬಾಕಿಯಿವೆ. ಈ ಪೈಕಿ ತುಮಕೂರು, ತುರುವೇಕೆರೆ ಹಾಗೂ ಕುಣಿಗಲ್ ತಾಲ್ಲೂಕುಗಳಲ್ಲಿ 3000 ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಬಾಕಿ ಉಳಿದಿರುವ ಪ್ರಕರಣಗಳನ್ನು ನಿಗದಿತ ಗಡುವಿನೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ರಾಜಸ್ವ ನಿರೀಕ್ಷಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ತಾಕೀತು ಮಾಡಿದರು.

ಪೈಕಿ ಪಹಣಿ ಒಟ್ಟುಗೂಡಿಸುವಿಕೆ :

     ಜಿಲ್ಲೆಯಲ್ಲಿ ‘ಪೈಕಿ ಪಹಣಿ ಒಟ್ಟುಗೂಡಿಸುವಿಕೆ’ಯಲ್ಲಿ 147 ಪ್ರಕರಣಗಳು ಪ್ರಗತಿಯಾಗಿರುವ ಬಗ್ಗೆ ತಹಸೀಲ್ದಾರರಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ‘ಪೈಕಿ ಪಹಣಿ ಒಟ್ಟುಗೂಡಿಸುವಿಕೆ’ ಕಾರ್ಯದಲ್ಲಿ ತಹಸೀಲ್ದಾರರ ಪಾತ್ರ ಪ್ರಮುಖವಾಗಿದೆ. ಪೈಕಿ ಪಹಣಿ ಒಟ್ಟುಗೂಡಿಸುವಿಕೆ ಕಡತಗಳ ಪ್ರಕರಣಗಳನ್ನು ತಹಸೀಲ್ದಾರರೇ ಇತ್ಯರ್ಥ ಪಡಿಸಬೇಕು ಎಂದು ನಿರ್ದೇಶಿಸಿದರು.

ಭೂಮಿ ಯೋಜನೆ ಪ್ರಗತಿ :

     ಭೂಮಿ ಯೋಜನೆ ಪ್ರಗತಿಯು ಜಿಲ್ಲೆಯ ಶ್ರೇಯಾಂಕ ನಿಗದಿಪಡಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದ್ದು, ಭೂಮಿ ಯೋಜನೆ ಪ್ರಗತಿ ಬಗ್ಗೆ ಎಲ್ಲಾ ತಹಶೀಲ್ದಾರ್‍ಗಳು ಹೆಚ್ಚು ಗಮನಹರಿಸಬೇಕು. ಶ್ರೇಯಾಂಕ ನಿಗದಿಪಡಿಸುವಲ್ಲಿ ನಿರ್ಲಕ್ಷ್ಯ ತೋರುವ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಬೆಳೆ ಸಮೀಕ್ಷೆ :

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆಯನ್ನು ನೂರರಷ್ಟು ಮಾಡಬೇಕಾಗಿದೆ. ಜಿಲ್ಲೆಯಲ್ಲಿ ಅಂದಾಜು 16 ಲಕ್ಷ ತಾಕುಗಳಿದ್ದು, ಅದರಲ್ಲಿ 8 ಲಕ್ಷ ತಾಕುಗಳ ಬೆಳೆ ವಿವರವನ್ನು ರೈತರೆ ಮಾಡಬೇಕಾಗಿದೆ. ಈ ಬಗ್ಗೆ ಹೆಚ್ಚು ಗಮನಹರಿಸಬೇಕು. ಬಾಕಿ ಉಳಿದ ತಾಕುಗಳ ಬೆಳೆ ಸಮೀಕ್ಷೆಯನ್ನು ಈಗಾಗಲೇ ನೇಮಕ ಮಾಡಲಾದ ಪಿ.ಆರ್.(ಖಾಸಗಿ ವ್ಯಕ್ತಿ)ಗಳು ರೈತರಿಗೆ ತರಬೇತಿ ನೀಡಿ ಬೆಳೆ ಸಮೀಕ್ಷೆ ಮಾಡುವಂತೆ ಸೂಕ್ತ ಕ್ರಮ ವಹಿಸಬೇಕು. ಎಲ್ಲಾ ತಹಸೀಲ್ದಾರ್‍ಗಳು ತಮ್ಮ ವ್ಯಾಪ್ತಿಯಲ್ಲಿ ವಾರಕ್ಕೆ ನಿಗದಿಪಡಿಸಿರುವ ಬೆಳೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.

ಸಾಮಾಜಿಕ ಭದ್ರತಾ ಯೋಜನೆ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯ :

     ಸಾಮಾಜಿಕ ಭದ್ರತಾ ಯೋಜನೆ ಸಮಗ್ರ ವಾರ್ಷಿಕ ಪರಿಶೀಲನಾ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಬೇಕು. ಈ ಸಂಬಂಧ ಜಿಲ್ಲೆಯಲ್ಲಿ 3620 ಪ್ರಕರಣಗಳಲ್ಲಿ ಮಾತ್ರ ಮಾಹಿತಿ ಸಂಗ್ರಹಿಸಿದ್ದು, 2,80,125 ಪ್ರಕರಣಗಳು ಬಾಕಿ ಇರುತ್ತವೆ. ಸಿರಾ ತಾಲ್ಲೂಕಿನಲ್ಲಿ 1 ಪ್ರಕರಣದಲ್ಲಿ ಮಾತ್ರ ಮಾಹಿತಿ ಸಂಗ್ರಹಿಸಲಾಗಿದೆ ಎಂದ ಜಿಲ್ಲಾಧಿಕಾರಿ, ಈ ಬಗ್ಗೆ ಗಮನಕೊಡುವಂತೆ ತಹಸೀಲ್ದಾರ್‍ಗಳಿಗೆ ನಿರ್ದೇಶಿಸಿದರು.

ಆಧಾರ್ ಸೀಡಿಂಗ್:

      ಜಿಲ್ಲೆಯಲ್ಲಿ ಒಟ್ಟು 1444 ಆಧಾರ್ ಸೀಡಿಂಗ್ ಮಾಡಲು ಪ್ರಕರಣಗಳು ಬಾಕಿ ಇದ್ದು, ಈ ಪೈಕಿ ಗುಬ್ಬಿ, ತುಮಕೂರು ತಾಲ್ಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ಬಾಕಿ ಇರುತ್ತದೆ. ಮುಂದಿನ ಸಭೆಯೊಳಗೆ ಯಾವುದೇ ಪ್ರಕರಣಗಳು ಬಾಕಿ ಇರಬಾರದು ಎಂದು ತಹಸೀಲ್ದಾರ್‍ಗಳಿಗೆ ಸೂಚಿಸಿದರು.

ಪಿಂಚಣಿ ಯೋಜನೆ ಅಮಾನತ್ತು ಪ್ರಕರಣಗಳು :

     ಪಿಂಚಣಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ತಲುಪಿಸುವ ಯೋಜನೆಯಾಗಿದೆ. ಪಿಂಚಣಿಯು ಜೀವನದ ಆಧಾರವಾಗಿದ್ದು, ನಿಗದಿತ ಅವಧಿಯಲ್ಲಿ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಬೇಕು. ಅಂತೆಯೇ ಜಿಲ್ಲೆಯಲ್ಲಿ ಬಾಕಿಯಿರುವ 663 ಅಮಾನತ್ತು ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ತಹಸೀಲ್ದಾರ್‍ಗಳಿಗೆ ಸೂಚನೆ ನೀಡಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ತಹಸೀಲ್ದಾರ್‍ಗಳು, ಪೌರಾಡಳಿತ ಇಲಾಖೆಯ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಮತ್ತು ಆರೋಗ್ಯ ಇಲಾಖಾಧಿಕಾರಿಗಳು, ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link