ಎತ್ತಿನಹೊಳೆಯಲ್ಲಿ ನೀರಿನ ಲಭ್ಯತೆ ಮರು ಪರಿಶೀಲಸಿ; ಪಿಎಂ ಮೋದಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಪತ್ರ

ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾ. ಜಿಲ್ಲೆಗಳಿಗೆ ಜಲ ಅನ್ಯಾಯ: ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ

ಬೆಂಗಳೂರು: ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಆಗುತ್ತಿರುವ ನೀರಾವರಿ ಅನ್ಯಾಯಗಳ ಬಗ್ಗೆ ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಗಮನ ಸೆಳೆದರೂ ಫಲಿತಾಂಶ ಶೂನ್ಯವಾದ ನಂತರ ಬೇಸತ್ತ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಂತಿಮವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಜಲ ಅನ್ಯಾಯ ಸರಿಪಡಿಸುವಂತೆ ಒತ್ತಾಯ ಮಾಡಿದೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಆರ್.ಆಂಜನೇಯ ರೆಡ್ಡಿ ಮಾತನಾಡಿದರು; ಪ್ರಧಾನಿ ಅವರಿಗೆ ಬರೆದಿರುವ ಸುದೀರ್ಘ ಪತ್ರದ ಬಗ್ಗೆ ಮಾಹಿತಿ ನೀಡಿದರಲ್ಲದೆ, ಪ್ರಧಾನಿಗಳ ಮುಂದೆ ನಾಲ್ಕು ಪ್ರಮುಖ ಬೇಡಿಕೆಗಳನ್ನು ಇರಿಸಲಾಗಿದೆ ಎಂದರು.

ಈಗಾಗಲೇ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾಗ್ಯೂ ಯಾವುದೇ ಫಲಿತಾಂಶ ಕಾಣದ ಎತ್ತಿನಹೊಳೆ ಯೋಜನೆಯ ಜಲ ವಿಜ್ಞಾನ ಹಾಗೂ ಆ ಜಲ ವಿಜ್ಞಾನವನ್ನು ಕೇಂದ್ರಿಯ ಜಲ ಆಯೋಗದಿಂದ ಪರಿಶೀಲನೆ ಮಾಡಿಸಲು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಆದೇಶ ನೀಡಬೇಕು ಎಂಬುದು ನಮ್ಮ ಪ್ರಮುಖ ಒತ್ತಾಯವಾಗಿದೆ ಎಂದು ಅವರು ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಬೆಂಗಳೂರು ತ್ಯಾಜ್ಯ ನೀರು ಹರಿದುಬಿಡುವ ಕೆ.ಸಿ.ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿ ಯೋಜನೆಗಳಲ್ಲಿ ತ್ಯಾಜ್ಯ ನೀರನ್ನು ಮೂರನೇ ಹಂತದಲ್ಲಿ ಶುದ್ದೀಕರಿಸಿ ಹರಿದುಬಿಡಲು ಸಿಪಿಹೆಚ್‍ಇಇಒ ಕೈಪಿಡಿ 2013ರ ಶಿಫಾರಸುಗಳು ಹಾಗೂ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಕರ್ನಾಟಕ ಸರಕಾರಕ್ಕೆ ಸ್ಪಷ್ಟ ನೀರ್ದೇಶನ ನೀಡಬೇಕು ಎನ್ನುವುದು ನಮ್ಮ ಎರಡನೇ ಬೇಡಿಕೆಯಾಗಿದೆ ಎಂದು ಆಂಜನೇಯ ರೆಡ್ಡಿ ಹೇಳಿದರು.

ಪ್ರತಿ ಗ್ರಾಮದಲ್ಲಿ ಆರ್‍ಒ ಘಟಕಗಳ ಪರೀಕ್ಷೆಯೊಂದಿಗೆ, ಎಲ್ಲಾ ಕೊಳಬೆ ಬಾವಿಗಳಲ್ಲಿನ ಕುಡಿಯುವ ನೀರಿನ ಪರೀಕ್ಷೆಗಳನ್ನು ನಡೆಸಬೇಕು. ಅದಕ್ಕೆ ಕೇಂದ್ರ ಮತ್ತು ರಾಜ್ಯದ ಸಂಬಂಧಪಟ್ಟ ಇಲಾಖೆಗಳು ಹಾಗೂ ಏಜೆನ್ಸಿಗಳಿಗೆ ಆದೇಶ ನೀಡಬೇಕು. ಇದು ನಮ್ಮ ಮೂರನೇ ಬೇಡಿಕೆ ಎಂದರು ಅವರು.

ಕೃಷ್ಣಾ ನದಿಯನ್ನು ಪೆನ್ನಾರ್ ಜಲಾನಯನ ಪ್ರದೇಶದೊಂದಿಗೆ ಜೋಡಿಸಲು ರಾಷ್ಟ್ರೀಯ ಜಲ ಅಭಿವೃದ್ಧಿ ಮಂಡಳಿ ಸಂಸ್ಥೆ ಯಿಂದ ಸಮಗ್ರವಾದ ಯೋಜನಾ ವರದಿಯನ್ನು ತಕ್ಷಣವೇ ಸಿದ್ಧಪಡಿಸಲು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂಬುದು ನಮ್ಮ ನಾಲ್ಕನೇ ಒತ್ತಾಯವಾಗಿದೆ ಎಂದು ಆಂಜನೇಯ ರೆಡ್ಡಿ ಅವರು ಮಾಹಿತಿ ನೀಡಿದರು.

ನೀರಿನ ಭದ್ರತೆ ಅಗತ್ಯ : ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನೀರಾವರಿ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳನ್ನು ಖರ್ಚು ಎಂದು ತೋರಿಸಿ ಕೊಳ್ಳೆ ಹೊಡೆಯಲಾಗಿದೆ. ಜನರ ನೀರಾವರಿ ಹಾಹಾಕಾರವನ್ನೇ ವ್ಯಾಪಾರ ಮಾಡಿಕೊಂಡಿರುವ ಮೂರೂ ಜಿಲ್ಲೆಗಳ ರಾಜಕಾರಣಿಗಳು ಹಾಗೂ ಸರಕಾರಗಳು ಅಪಾರ ಹಣವನ್ನು ಕೊಳ್ಳೆ ಹೊಡೆದಿವೆ. ಕಳೆದ ಎಪ್ಪತ್ತೈದು ವರ್ಷಗಳಿಂದ ಆಗುತ್ತಿರುವ ಈ ಜಲ ಅನ್ಯಾಯವನ್ನು ಕೊನೆಗಾಣಿಸಲು ಸ್ವತಃ ತಾವೇ ಮಧ್ಯಪ್ರವೇಶ ಮಾಡಬೇಕು ಎಂದು ಆಂಜನೇಯ ರೆಡ್ಡಿ ಅವರು ಪ್ರಧಾನಿಗಳಲ್ಲಿ ಪತ್ರ ಮುಖೇನ ಮನವಿ ಮಾಡಿದ್ದಾರೆ.

ಜಲಮೂಲಗಳಿಗೆ ಪುನರುಜ್ಜೀವ ನಿಡಿ : ಸಾಂಪ್ರಾಯಿಕ ಜಲಮೂಲಗಳನ್ನು ಪುನರುಜ್ಜಿವನಗೊಳಿಸದರೆ ಈ ಮೂರೂ ಬರಪೀಡಿತ ಜಿಲ್ಲೆಗಳಲ್ಲಿ ಅಪಾರ ಪ್ರಮಾಣದ ಜಲಸಂಪನ್ಮೂಲವನ್ನು ಸಂಗ್ರಹ ಮಾಡಬಹುದು. ಅಲ್ಲದೆ, ಪಾರಂಪರಿಕ ಜಲ ಸಂಗ್ರಹಗಾರಗಳಾದ ಕೆರೆ ಕುಂಟೆಗಳನ್ನು ಜೀರ್ಣೋದ್ಧಾರ ಮಾಡಿದರೆ ಸುಮಾರು ಐವತ್ತಕ್ಕೂ ಹೆಚ್ಚು ಟಿಎಂಸಿ ನೀರನ್ನು ಆಂತರಿಕವಾಗಿಯೇ ಹಿಡಿದಿಟ್ಟುಕೊಳ್ಳಬಹುದಾಗಿದೆ. ಆದರೆ, ಉತ್ತಮ ಮಳೆಯಾಗುತ್ತಿದ್ದರೂ ಆ ನೀರನ್ನು ಈ ಜಿಲ್ಲೆಗಳಲ್ಲಿ ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಆ ನೀರೆಲ್ಲ ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಸತ್ತು ಹೋಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಮಳ್ಳೂರು ಹರೀಶ್, ನಾಗದೇನಹಳ್ಳಿ ನಾರಾಯಣಸ್ವಾಮಿ, ಆನೂರು ದೇವರಾಜ್, ವಿಜಯಭಾವ ರೆಡ್ಡಿ, ಉಷಾರಾಣಿ, ಶ್ರೀನಿವಾಸ್ ಅವರು ಉಪಸ್ಥಿತರಿದ್ದರು.

ಬರಪೀಡಿತ ಜಿಲ್ಲೆಗಳಿಗೆ ನೀರು ಹರಿಸಲು ಬಹಳಷ್ಟು ಭಗೀರಥರು ಬಂದು ಹೋಗಿದ್ದಾರೆ. ಈ ದಿನದವರೆಗೂ ಜನರಿಗೆ ಹಸಿಸುಳ್ಳುಗಳನ್ನೇ ಹೇಳುತ್ತಿದ್ದಾರೆ. ಸುಜಲಾ ಒಂದು, ಸುಜಲಾ ಎರಡು ಹಾಗೂ ಜಲಾನಯನ ಅಭಿವೃದ್ಧಿ ಪ್ರದೇಶ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಕೋಟ್ಯಂತರ ರೂಪಾಯಿ ಕೊಳ್ಳೆ ಹೊಡೆಯಲಾಗಿದೆ. ಇನ್ನಾದರೂ ನಮಗೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದ ಪ್ರಧಾನಿಗಳೇ ಪತ್ರ ಬರೆದಿದ್ದೇವೆ. ಮುಂದಿನ ಹೋರಾಟವನ್ನೂ ಬೇರೆಯದ್ದೇ ರೀತಿಯಲ್ಲಿ ರೂಪಿಸುತ್ತೇವೆ.

– ಆರ್.ಆಂಜನೇಯ ರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ

Recent Articles

spot_img

Related Stories

Share via
Copy link
Powered by Social Snap