ತುರುವೇಕೆರೆ:
ಮರಣ ಶಾಸನವಾದ ಗಣಿಗಾರಿಕೆ : ರೈತರಿಂದ ಕಾನೂನು ಹೋರಾಟದ ಎಚ್ಚರಿಕೆ
ತಾಲ್ಲೂಕಿನ ಕೋಳಘಟ್ಟ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗೆ ಅಕ್ಕಪಕ್ಕದ ಗ್ರಾಮಸ್ಥರ ವಿರೋಧ ಹೆಚ್ಚಾಗುತ್ತಿದ್ದು, ಪ್ರತಿಭಟನಾಕಾರ ರೈತರನ್ನು ಶುಕ್ರವಾರ ಪೊಲೀಸರ ಸರ್ಪಗಾವಲಿನಲ್ಲಿ ಬಲವಂತವಾಗಿ ತೆರವುಗೊಳಿಸಿದ ಘಟನೆ ನಡೆದಿದೆ.
ಕೋಳಘಟ್ಟ ಹೊರವಲಯದಲ್ಲಿನ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳದಲ್ಲಿ ಸುಮಾರು ದಿನಗಳಿಂದ ಗ್ರಾಮಸ್ಥರು ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸುವಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಬುಧವಾರ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರು ನೂರಾರು ರೈತರೊಂದಿಗೆ ಆಗಮಿಸಿ ಪ್ರತಿಭಟಿಸಿ ಕಲ್ಲು ಕಣಿಗಾರಿಕೆಯಿಂದ ಸ್ಥಳಿಯ ರೈತರಿಗೆ ಅನ್ಯಾಯವಾಗುತ್ತಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಗಣಿಗಾರಿಕೆ ನಿಲ್ಲಿಸುವಂತೆ ಒತ್ತಾಯಿಸಿದ್ದರು.
ಇಬ್ಬರು ವೃದ್ಧರು ಸತ್ತಿದ್ದಾರೆ :
ಜೆಡಿಎಸ್ ಮುಖಂಡ ದೊಡ್ಡಾಘಟ್ಟ ಚಂದ್ರೇಶ್ ಮಾತನಾಡಿ, ಜಿಲ್ಲಾಡಳಿತ ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿರುವುದು ಇಲ್ಲಿನ ರೈತರಿಗೆ ಮರಣ ಶಾಸನವಾಗಿದೆ. ಕಲ್ಲು ಗಣಿಗಾರಿಕೆಯಿಂದ ಜನ, ಜಾನುವಾರುಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ.
ಬಂಡೆ ಸ್ಪೋಟಕದಿಂದ ಹಲವು ಜಾನುವಾರುಗಳು, ಇಬ್ಬರು ವೃದ್ಧರು ಸಾವನ್ನಪ್ಪಿದ್ದಾರೆ. ಹಲವು ಹಳ್ಳಿಗಳ ಮನೆಗಳು, ದೇವಸ್ಥಾನಗಳು ಬಿರುಕು ಬಿಟ್ಟಿವೆ ಎಂದು ತಿಳಿಸಿದರು.
ಸ್ಥಳದಲ್ಲಿ ಡಿವೈಎಸ್‍ಪಿ ರಮೇಶ್, ಪಿಎಸ್‍ಐಗಳಾದ ಕೇಶವಮೂರ್ತಿ, ಶಿವಲಿಂಗಪ್ಪ ಸೇರಿದಂತೆ ಪೊಲೀಸರು ಹಾಗೂ ಅವರ ವಾಹನಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶಂಕರಪ್ಪ, ನಾಗರಾಜು, ಮಹಾಲಿಂಗಪ್ಪ, ರವಿ, ಈಶಣ್ಣ, ಮಲ್ಲಿಕಾರ್ಜುನ್, ಸತೀಶ್, ಓಂಕಾರಮೂರ್ತಿ, ರೇಣಕಪ್ರಸಾದ್, ರಾಜಶೇಖರಯ್ಯ, ಗುರುಲಿಂಗಯ್ಯ, ರಮೇಶ್, ಶಿಲ್ಪ, ಶ್ವೇತಾ, ಸುಮಾ, ಕಮಲಮ್ಮ, ಭಾನು, ಶಿವಮ್ಮ, ಲಕ್ಷ್ಮಿದೇವಮ್ಮ, ಗೌರಮ್ಮ, ಸುಕನ್ಯ, ಚನ್ನಮ್ಮ, ವೀಣಾ, ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಇದ್ದರು.
ಪೊಲೀಸರು ಲಾಠಿಯಲ್ಲಿ ಹೊಡೆದರು :
ನಮ್ಮದು ಪಟ್ಟಾ ಜಮೀನಿನ ರಸ್ತೆಯಾಗಿದ್ದು, ರೈತರು ತಮ್ಮ ಜಮೀನುಗಳಿಗೆ ತೆರಳಲು ರಸ್ತೆ ಮಾಡಿಕೊಂಡಿದ್ದು ಈ ರಸ್ತೆಯಲ್ಲಿ ಜಿಲ್ಲಿ ತುಂಬಿದ ಲಾರಿಗಳು ತೆರಳುತ್ತಿದ್ದರಿಂದ ರಸ್ತೆ ಹಾಳಾಗುತ್ತಿದೆ. ಆದ್ದರಿಂದ ನಾವುಗಳು ಲಾರಿಗಳನ್ನು ಬಿಡುವುದಿಲ್ಲ ಎಂದು ಶುಕ್ರವಾರ ರಸ್ತೆಗೆ ಅಡ್ಡಲಾಗಿ ಕುಳಿತು ಗ್ರಾಮಸ್ಥರು ಪ್ರತಿಭಟಸಿದ್ದಾರೆ.
ಕಲ್ಲು ತುಂಬಿದ ಲಾರಿಯನ್ನು ಮುಂದಕ್ಕೆ ಕಳಿಸಲು ಪೊಲೀಸರು ಬಲವಂತವಾಗಿ ಪ್ರತಿಭಟನಾ ನಿರತರನ್ನು ತೆರವುಗೊಳಿಸಲು ಮುಂದಾಗಿ ರೈತರಿಗೆ ಲಾಟಿಯಲ್ಲಿ ಥಳಿಸಿದ್ದು, ಈ ಸಂದರ್ಭದಲ್ಲಿ ಕೋಳಘಟ್ಟದ ರಾಜಶೇಖರ್ ತೀವ್ರವಾಗಿ ಅಸ್ವಸ್ಥನಾಗಿದ್ದು ಆತನನ್ನು ಕೂಟಲೇ 108 ಆಂಬ್ಯೂಲೆನ್ಸ್ ಕರೆÀಸಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
-ಮಹಾಲಿಂಗಪ್ಪ, ರೈತ
ರೈತರಿಗೆ, ಪರಿಸರಕ್ಕೆ, ಬೆಳಗಳಿಗೆ ಹಾನಿಯಾಗಿದೆ ಆದರೂ ಸಹ ಸ್ಥಳಿಯ ಜನಪ್ರತಿನಿಧಿಗಳು, ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಲು ಮುಂದಾಗಿಲ್ಲ ಮುಂದಿನ ದಿನಗಳಲ್ಲಿ ರೈತರ ಪರವಾಗಿ ಕಾನೂನು ಹೋರಾಟ ನಡೆಸಲಾಗುವುದು.
-ದೊಡ್ಡಾಘಟ್ಟ ಚಂದ್ರೇಶ್, ಜೆಡಿಎಸ್ ಮುಖಂಡ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ