ಹರಿಹರ:
ಕಾರು ರಸ್ತೆಯಲ್ಲಿನ ಡಿವೈಡರ್ ಗೆ ಅಪ್ಪಳಿಸಿ, ಲಾರಿಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟ ಘಟನೆ ಶನಿವಾರ ಬೆಳಿಗ್ಗೆ 3:30ರ ಸುಮಾರಿಗೆ ನಡೆದಿದೆ.
ತಾಲೂಕಿನ ಹನಗವಾಡಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬೆಳಗಿನಜಾವ 3:30ರ ಸುಮಾರಿಗೆ ಬೆಂಗಳೂರಿನ ಕಡೆಯಿಂದ ಹುಬ್ಬಳ್ಳಿಕಡೆಗೆ ಕೆ.ಎ 42 ಎಮ್ 9491 ಕಾರು ಚಲಿಸುತ್ತಿರುವಾಗ, ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯ ಮಧ್ಯೆದಲ್ಲಿರುವ ಡಿವೈಡರ್ ತಡೆಗೋಡೆಗೆ ಅಪ್ಪಳಿಸಿದ ಪರಿಣಾಮ, ರಸ್ತೆಯ ಬಲಭಾಗಕ್ಕೆ ಕಾರು ಜಿಗಿದು, ಬಲಭಾಗದ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಎಮ್.ಎಚ್ 09 ಇ.ಎಮ್ 9155 ಲಾರಿಗೆ ಡಿಕ್ಕಿಯಾಗಿದೆ.
ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಸಂಚರಿಸುತ್ತಿದ್ದ ಸಿದ್ದಪ್ಪ, ಅಜಣ್ಣ, ವಿನಯ್ ಎಂಬ ಮೂರು ಜನರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ. ವಿನಯ್ ಡಿ.ಪಿ ಎಂಬ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿಯೇ ಮೃತಪಟ್ಟಿದ್ದಾನೆ. ಉಳಿದ ಕಿರಣ್ ಮತ್ತು ಗಿರೀಶ್ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ದಾವಣಗೆರೆ ಸಿ.ಜಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಈ ಪ್ರಕರಣವು ಹರಿಹರ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.